×
Ad

ತಂದೆಗಾಗಿ ತನ್ನ ಕಿಡ್ನಿಯೊಂದನ್ನು ದಾನ ಮಾಡಿಲಿರುವ ಲಾಲು ಪ್ರಸಾದ್‌ ಯಾದವ್‌ ಪುತ್ರಿ: ವರದಿ

Update: 2022-11-10 16:37 IST

 ಹೊಸದಿಲ್ಲಿ,ನ.10: ಕೆಲವು ಸಮಯದಿಂದ ಅನಾರೋಗ್ಯಪೀಡಿತರಾಗಿರುವ ಆರ್ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರು ಈ ತಿಂಗಳ ಉತ್ತರಾರ್ಧದಲ್ಲಿ ಮೂತ್ರಪಿಂಡ ಕಸಿಗೆ ಒಳಗಾಗಲಿದ್ದು,ಪುತ್ರಿ ರೋಹಿಣಿ ಆಚಾರ್ಯ ಅವರಿಂದ ಮೂತ್ರಪಿಂಡವನ್ನು ಸ್ವೀಕರಿಸಲಿದ್ದಾರೆ.

‘ಹೌದು,ಅದು ನಿಜ. ನಾನು ಅದೃಷ್ಟದ ಮಗು ಮತ್ತು ತಂದೆಗೆ ಮೂತ್ರಪಿಂಡ ನೀಡಲು ನನಗೆ ತುಂಬ ಹೆಮ್ಮೆಯಾಗುತ್ತಿದೆ ’ ಎಂದು ಸಿಂಗಾಪುರದಲ್ಲಿ ನೆಲೆಸಿರುವ ಲಾಲುರ ಎರಡನೇ ಪುತ್ರಿ ರೋಹಿಣಿ ಆಚಾರ್ಯ ಹೇಳಿದರು.

ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ತೆರಳಿದ್ದ ಲಾಲು ಕಳೆದ ತಿಂಗಳು ಅಲ್ಲಿಂದ ವಾಪಸಾಗಿದ್ದಾರೆ. ಮೂರು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿದ್ದ 74ರ ಹರೆಯದ ಈ ಹಿರಿಯ ರಾಜಕಾರಣಿ ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

ಮೂತ್ರಪಿಂಡ ಕಸಿ ಮಾಡಿಸಿಕೊಳ್ಳುವಂತೆ ವೈದ್ಯರು ಅವರಿಗೆ ಇತ್ತೀಚಿಗೆ ಸಲಹೆ ನೀಡಿದ್ದರು.

ರೋಹಿಣಿ ತನ್ನ ತಂದೆಗೆ ಹೊಸ ಜೀವನವನ್ನು ನೀಡಲು ಮುಂದಾಗಿದ್ದಾರೆ ಎಂದು ಕುಟುಂಬ ಸದಸ್ಯರೋರ್ವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಕಳೆದ ತಿಂಗಳು ತನ್ನ ತಂದೆಯ ಜೊತೆಗಿನ ಚಿತ್ರಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದ ರೋಹಿಣಿ,‘ದಬ್ಬಾಳಿಕೆಯ ಚಿಂತನೆಯ ವಿರುದ್ಧ ಹೋರಾಡಲು ಈ ದೇಶಕ್ಕೆ ನಿಮ್ಮ ಉಪಸ್ಥಿತಿಯ ಅಗತ್ಯವಿದೆ’ ಎಂದು ಬರೆದುಕೊಂಡಿದ್ದರು.

ಜಾಮೀನಿನಲ್ಲಿರುವ ಲಾಲು ಪ್ರಸಾದ ಪ್ರಸ್ತುತ ದಿಲ್ಲಿಯಲ್ಲಿದ್ದಾರೆ. ಮೇವು ಹಗರಣ ಪ್ರಕರಣಗಳಲ್ಲಿ ಜೈಲು ಸೇರಿದ್ದ ಅವರನ್ನು ಹಲವಾರು ಬಾರಿ ಚಿಕಿತ್ಸೆಗಾಗಿ ದಿಲ್ಲಿ ಮತ್ತು ರಾಂಚಿ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು.

Similar News