×
Ad

ಮಂಗಳೂರು; ನ.19-20ರಂದು ಸಂಘ ನಿಕೇತನದಲ್ಲಿ 'ಕನ್ನಡ ಶಾಲಾ ಮಕ್ಕಳ ಹಬ್ಬ': ಡಾ.ಮೋಹನ್ ಆಳ್ವ

Update: 2022-11-10 21:00 IST

ಮಂಗಳೂರು, ನ.10: ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಆತ್ಮವಿಶ್ವಾಸ ವೃದ್ಧಿ ಹಾಗೂ ವಿದ್ಯಾರ್ಥಿ ಸಮುದಾಯದಲ್ಲಿ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ಅರಿವನ್ನು ವಿಸ್ತರಿಸುವ ಉದ್ದೇಶದಿಂದ ಕೇಶವ ಸ್ಮೃತಿ ಸಂವರ್ಧನ ಸಮಿತಿಯು ಕನ್ನಡ ಶಾಲಾ ಮಕ್ಕಳ ಹಬ್ಬವನ್ನು ನ.19 ಮತ್ತು 20ರಂದು ಮಂಗಳೂರಿನ ಸಂಘನಿಕೇತನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಶಾಲಾ ಮಕ್ಕಳ ಹಬ್ಬದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾ. ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಈ ಸಮಾವೇಶದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ 5ನೇ ತರಗತಿ ಮೇಲಟ್ಟ 10ನೇ ತರಗತಿ ತನಕದ ಪಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. 15 ಸಾವಿರದಷ್ಟು ವಿದ್ಯಾರ್ಥಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದವರು ತಿಳಿಸಿದ್ದಾರೆ.

ನ.19ರಂದು ಬೆಳಗ್ಗೆ 10 ಗಂಟೆಗೆ ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಮೈದಾನದಿಂದ ಮೆರವಣಿಗೆಯು ಸಂಘಕೇತನ ತನಕ ನಡೆಯಲಿದೆ. ನಂತರ ಬೆಳಗ್ಗೆ 10:30ಕ್ಕೆ ಕನ್ನಡ ನಾಡಿನ ಇತಿಹಾಸ, ಭಾಷೆ, ಸಾಹಿತ್ಯದ ಮಹತ್ವ, ರಾಷ್ಟ್ರೀಯ ಮತ್ತು ರಾಜ್ಯದ ಮಹನೀಯರ ಚಿಂತನೆಗಳ ಸಾಕ್ಷ್ಯಚಿತ್ರ ಪ್ರದರ್ಶನ, ಪುಸ್ತಕ ಪದರ್ಶನಗಳಿಗೆ ಚಾಲನೆ ದೊರಕಲಿದೆ. ಬೆ.11ಗಂಟೆಗೆ ಬೃಹತ್ ವಿದ್ಯಾರ್ಥಿ ಸಮಾವೇಶವು ನಾಡಿನ, ಗಣ್ಯ, ಸಾಧಕರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದೆ.

ವೇದಿಕೆಯಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕುದ್ರೋಳಿ ಗಣೇಶ್‌ರಿಂದ ಜಾದೂ ಪ್ರದರ್ಶನ ನಡೆಯಲಿದೆ. ಮುಖ್ಯ ಸಭಾಂಗಣಕ್ಕೆ ಪಂಜೆ ಮಂಗೇಶ್ ರಾವ್ ವೇದಿಕೆ ಎಂದು ಹೆಸರಿಡಲಾಗಿದೆ. 2ನೇ ವೇದಿಕೆಯು ಶಿವರಾಮ್ ಕಾರಂತ ವೇದಿಕೆಯಾಗಿರುತ್ತದೆ. ಇದರಲ್ಲಿ ಶಿಕ್ಷಕರ ಜೊತೆ ಸಂವಾದವನ್ನು ರೋಹಿತ್  ಚಕ್ರತೀರ್ಥ ನಡೆಸಿಕೊಡಲಿದ್ದಾರೆ. ರಾಜೇಶ್ ಪದ್ಮಾರ್ ಕನ್ನಡ ಮತ್ತು ರಾಷ್ಟ್ರೀಯತೆ ಗೋಷ್ಠಿಯನ್ನು, ಕನ್ನಡ ಶಾಲೆಯಲ್ಲಿ ಓದಿದವರು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಸಂವಾದವನ್ನು ಐಎಎಸ್ ಅಧಿಕಾರಿ ನಂದಿನಿ ಇವರು ನೆರವೇರಿಸಲಿದ್ದಾರೆ. 3ನೇ ವೇದಿಕೆ "ಕುದ್ಮಲ್ ರಂಗ ರಾವ್ ವೇದಿಕೆ”. ಈ ವೇದಿಕೆಯಲ್ಲಿ ವಿದ್ಯಾರ್ಥಿಗಳಿಗೆ ನಾಯಕತ್ವ ತರಬೇತಿ, ವೃತ್ತಿ ಮಾರ್ಗದರ್ಶನ, ಪ್ರತಿಭಾ ಪ್ರದರ್ಶನ ನಡೆಯಲಿದೆ ಎಂದವರು ತಿಳಿಸಿದ್ದಾರೆ.

ನವೆಂಬರ್ 20ರಂದು ಮೊದಲ ವೇದಿಕೆಯಲ್ಲಿ ಜೀವನರಾಮ್ ಸುಳ್ಯ ಇವರಿಂದ ರಂಗಾಭಿನಯ ಹಾಗೂ ರಂಗಗೀತೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. 2ನೇ ವೇದಿಕೆಯಲ್ಲಿ ಕನ್ನಡ ಎಂದರೆ ಬರಿ ನುಡಿ ಅಲ್ಲ ಎಂಬ ಗೋಷ್ಠಿಯನ್ನು ಚಕ್ರವರ್ತಿ ಸೂಲಿಬೆಲೆ, ಡಾ. ಪ್ರಭಾಕರ ಭಟ್ ಕಲ್ಲಡ್ಕ, ಡಾ. ಮೋಹನ್ ಆಳ್ವ ಮತ್ತು  ಚಂದ್ರಶೇಖರ ದಾಮ್ಲಯವರಿಂದ ಕನ್ನಡ ಶಾಲಾ ಯಶೋಗಾಥೆಯ ಗೋಷ್ಠಿಯು ಶಿಕ್ಷಕ ಹಾಗೂ ಪೋಷಕರೊಂದಿಗೆ ನಡೆಯಲಿದೆ. ಮುನಿರಾಜ ರೆಂಜಾಳ ಇವರಿಂದ ಸಮಾವೇಶ ನಡೆಯಲಿದೆ. 3ನೇ ವೇದಿಕೆಯಲ್ಲಿ ಪ್ರತಿಭಾ ಪದರ್ಶನ ನಡೆಯಲಿದೆ. ನ.20ರಂದು ಮಧ್ಯಾಹ್ನ ನಂತರ 3 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಸಮಾರೋಪವನ್ನು ಕರ್ನಾಟಕ ಸರ್ಕಾರ ವಿಧಾನ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ನೆರವೇರಿಸಲಿದ್ದಾರೆ ಎಂದು ಡಾ.ಮೋಹನ್ ಆಳ್ವ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ದೇವಿ ಪ್ರಸಾದ್ ಶೆಟ್ಟಿ, ಪದಾಧಿಕಾರಿಗಳಾದ ಕೆ.ಸಿ.ನಾಯ್ಕ್, ಎಂ.ಬಿ.ಪುರಾಣಿಕ್, ಸುಧಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Similar News