ಎಲ್ಲಾ ರಕ್ಷಣಾ ವ್ಯವಸ್ಥೆಗಳನ್ನು ಬೇಧಿಸಬಲ್ಲ ಹೈಪರ್ಸಾನಿಕ್ ಕ್ಷಿಪಣಿ ಉತ್ಪಾದಿಸಿದ ಇರಾನ್: ವರದಿ

Update: 2022-11-10 16:00 GMT

ಟೆಹ್ರಾನ್, ನ.10: ಎದುರಾಳಿಗಳ ಎಲ್ಲಾ ರಕ್ಷಣಾ  ವ್ಯವಸ್ಥೆಗಳನ್ನೂ ಬೇಧಿಸಿ ಮುನ್ನುಗ್ಗುವ ಸಾಮರ್ಥ್ಯವನ್ನು ಅತ್ಯಾಧುನಿಕ ಹೈಪರ್ಸಾನಿಕ್ ಕ್ಷಿಪಣಿಯನ್ನು ಇರಾನ್(Iran) ಅಭಿವೃದ್ಧಿಗೊಳಿಸಿದೆ ಎಂದು ರೆವೊಲ್ಯುಷನರಿ ಗಾರ್ಡ್ಸ್‌ನ ವಾಯುಯಾನ ಘಟಕದ ಕಮಾಂಡರ್ ಜನರಲ್ ಅಮೀರಲಿ ಹಜೀಝಾದೆ(Ameerali Hazeezade) ಹೇಳಿದ್ದಾರೆ.

ಸಾಂಪ್ರದಾಯಕ ಬ್ಯಾಲಿಸ್ಟಿಕ್ ಕ್ಷಿಪಣಿಗಳಂತೆಯೇ, ಹೈಪರ್ಸಾನಿಕ್ ಕ್ಷಿಪಣಿಗಳು ಪರಮಾಣು ಅಸ್ತ್ರಗಳನ್ನು ಹೊತ್ತೊಯ್ಯುವ ಜತೆಗೆ, ಶಬ್ದದ ವೇಗಕ್ಕಿಂತ 5 ಪಟ್ಟು ವೇಗದಲ್ಲಿ ಗುರಿಯತ್ತ ಮುನ್ನುಗ್ಗುತ್ತವೆ.

ಈ ಹೈಪರ್ಸಾನಿಕ್ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಎಲ್ಲಾ ವಾಯುರಕ್ಷಣಾ ವ್ಯವಸ್ಥೆಯನ್ನು ಬೇಧಿಸುವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಎಲ್ಲಾ  ಕ್ಷಿಪಣಿ ನಿರೋಧಕ ವ್ಯವಸ್ಥೆಯಿಂದ ಇದು ನುಣುಚಿಕೊಳ್ಳಬಹುದು. ಜತೆಗೆ, ಶತ್ರುಗಳ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ನಾಶಗೊಳಿಸಬಹುದು. ಈ ಅತ್ಯಾಧುನಿಕ ಕ್ಷಿಪಣಿಯನ್ನು ನಿರೋಧಿಸುವ ವ್ಯವಸ್ಥೆ ಅಭಿವೃದ್ಧಿಪಡಿಸಲು ಹಲವು ದಶಕಗಳೇ ಬೇಕಾಗಬಹುದು ಎಂದು  ಹಜೀಝಾದೆ ಹೇಳಿದ್ದಾರೆ.

ಕ್ಷಿಪಣಿ ಅಭಿವೃದ್ಧಿಯ ರೇಸ್ನಲ್ಲಿ ರಶ್ಯ ಪ್ರಥಮ ಸ್ಥಾನದಲ್ಲಿದ್ದರೆ ಚೀನಾ ಮತ್ತು ಅಮೆರಿಕ ಆ ಬಳಿಕದ ಸ್ಥಾನದಲ್ಲಿವೆ. ಉಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವ ರಶ್ಯಕ್ಕೆ ಡ್ರೋನ್ಗಳ ಜತೆ ಅತ್ಯಾಧುನಿಕ ಕ್ಷಿಪಣಿ ಪೂರೈಸಲೂ ಇರಾನ್ ನಿರ್ಧರಿಸಿದೆ ಎಂದು ಕಳೆದ ತಿಂಗಳು `ವಾಷಿಂಗ್ಟನ್ ಪೋಸ್ಟ್' (The Washington Post)ವರದಿ ಮಾಡಿತ್ತು. 

Similar News