ಚುನಾವಣೆ ನಡೆಯಲಿರುವ ಗುಜರಾತ್, ಹಿಮಾಚಲದಲ್ಲಿ ದಾಖಲೆ ಪ್ರಮಾಣದ ನಗದು, ವಸ್ತುಗಳ ವಶ

Update: 2022-11-11 16:01 GMT

ಹೊಸದಿಲ್ಲಿ, ನ. 11: ಚುನಾವಣೆ(election) ನಡೆಯಲಿರುವ ರಾಜ್ಯಗಳಾದ ಹಿಮಾಚಲ ಪ್ರದೇಶ (Himachal Pradesh)ಮತ್ತು ಗುಜರಾತ್(Gujarat) ನಲ್ಲಿ ದಾಖಲೆ ಪ್ರಮಾಣದಲ್ಲಿ ನಗದು, ಮದ್ಯ, ಮಾದಕ ವಸ್ತು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಶುಕ್ರವಾರ ತಿಳಿಸಿದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ವಶಪಡಿಸಿಕೊಳ್ಳಲಾದ ನಗದು ಮತ್ತು ವಸ್ತುಗಳ ಮೌಲ್ಯ ಕ್ರಮವಾಗಿ 71.88 ಕೋಟಿ ರೂಪಾಯಿ ಮತ್ತು 50.28 ಕೋಟಿ ರೂಪಾಯಿ ಎಂದು ಆಯೋಗ ಹೇಳಿದೆ.

ಹಿಮಾಚಲ ಪ್ರದೇಶದಲ್ಲಿ ಶನಿವಾರ (ನವೆಂಬರ್ 12) ಮತದಾನ ನಡೆದರೆ, ಗುಜರಾತ್ ನಲ್ಲಿ ಡಿಸೆಂಬರ್ 1 ಮತ್ತು 5ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಎರಡೂ ರಾಜ್ಯಗಳ ಮತ ಎಣಿಕೆಯು ಡಿಸೆಂಬರ್ 8ರಂದು ನಡೆಯಲಿದೆ.

ಗುಜರಾತ್ ನಲ್ಲಿ, ಕಚ್  ನಲ್ಲಿರುವ ಮುಂಡ್ರಾ ಬಂದರಿನಿಂದ 64 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಆಟಿಕೆಗಳು ಮತ್ತು ಇಲೆಕ್ಟ್ರಾನಿಕ್ ಉಪಕರಣಗಳು ಸೇರಿವೆ. ಇದರ ಜೊತೆಗೆ, 66 ಲಕ್ಷ ರೂ. ನಗದು, 3.86 ಕೋಟಿ ರೂ. ಮೌಲ್ಯದ ಮದ್ಯ, 94 ಲಕ್ಷ ರೂಪಾಯಿ ಮೌಲ್ಯದ ಮಾದಕ ದ್ರವ್ಯ ಮತ್ತು 1.86 ಕೋಟಿ ರೂ. ಮೌಲ್ಯದ ಬೆಲೆಬಾಳುವ ಲೋಹಗಳನ್ನೂ ವಶಪಡಿಸಿಕೊಳ್ಳಲಾಗಿದೆ. ‘‘ಸೂತ್ರಧಾರ ಸೇರಿದಂತೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ’’ ಎಂದು ಆಯೋಗ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಅದೇ ವೇಳೆ, ಹಿಮಾಚಲ ಪ್ರದೇಶದಲ್ಲಿ, 17.18 ಕೋಟಿ ರೂ. ನಗದು, 17.50 ಕೋಟಿ ರೂ. ಬೆಲೆಯ ಮದ್ಯ, 1.2 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ, 13.99 ಕೋಟಿ ರೂ. ಮೌಲದ್ಯ ಅಮೂಲ್ಯ ಲೋಹಗಳು ಮತ್ತು 41 ಲಕ್ಷ ರೂ. ಬೆಲೆಯ ವಸ್ತುಗಳನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದೆ.

ಮುಖ್ಯಾಂಶಗಳು

*ಗುಜರಾತ್ ನಲ್ಲಿ ನಗದು, ಮದ್ಯ, ಮಾದಕ ದ್ಯವ್ಯ, ಅಮೂಲ್ಯ ಲೋಹ, ಆಟಿಕೆಗಳು ಮತ್ತು ಇಲೆಕ್ಟ್ರಾನಿಕ್ ಉಪಕರಣಗಳು ಸೇರಿದಂತೆ 71.88 ಕೋಟಿ ರೂ. ಮೌಲ್ಯದ ವಸ್ತುಗಳ ವಶ.

*ಹಿಮಾಚಲ ಪ್ರದೇಶದಲ್ಲಿ ನಗದು, ಮದ್ಯ, ಮಾದಕ ದ್ರವ್ಯ, ಅಮೂಲ್ಯ ಲೋಹ ಮತ್ತು ಇತರ ವಸ್ತುಗಳು ಸೇರಿದಂತೆ 50.28 ಕೋಟಿ ರೂ. ಮೌಲ್ಯದ ವಸ್ತುಗಳ ವಶ.

Similar News