ಮೂತ್ರಕೋಶ ಕಲ್ಲು ತೆಗೆಯಲು ನಡೆಸಿದ ಶಸ್ತ್ರಚಿಕಿತ್ಸೆ ಬಳಿಕ ಕಿಡ್ನಿಯೇ ಮಾಯ!

Update: 2022-11-12 02:30 GMT

ಆಗ್ರಾ: ಮೂತ್ರಕೋಶದ ಕಲ್ಲು ಹೊರತೆಗೆಯಲು ನಡೆಸಿದ ಶಸ್ತ್ರಚಿಕಿತ್ಸೆ ಬಳಿಕ ವ್ಯಕ್ತಿಯೊಬ್ಬರ ಕಿಡ್ನಿಯೇ ಮಾಯವಾದ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ. ಕಿಡ್ನಿಕಲ್ಲು ತೆಗೆಯುವ ನೆಪದಲ್ಲಿ ಅಲೀಗಢದ ಖಾಸಗಿ ಆಸ್ಪತ್ರೆಯೊಂದು ವ್ಯಕ್ತಿಯ ಕಿಡ್ನಿಯನ್ನೇ ತೆಗೆದಿದೆ ಎಂದು ಆಪಾದಿಸಲಾಗಿದೆ. ಈ ಬಗ್ಗೆ timesofindia.com ವರದಿ ಮಾಡಿದೆ.

ಖಾಸ್‍ಗಂಜ್ ಮುಖ್ಯ ಅಭಿವೃದ್ಧಿ ಅಧಿಕಾರಿಯ ಕಚೇರಿಯಲ್ಲಿ ನಿಯೋಜನೆಗೊಂಡಿದ್ದ ಸುರೇಶ್‍ ಚಂದ್ರ ಎಂಬವರಿಗೆ ಹೊಟ್ಟೆಯ ಕೆಳಭಾಗದಲ್ಲಿ ತೀವ್ರ ನೋವು ಕಾಣಿಸಿಕೊಂಡಿತ್ತು. ಅಲ್ಟ್ರಾಸೌಂಡ್ ತಪಾಸಣೆ ಮಾಡಿಸಿದಾಗ ಅವರ ಎಡಭಾಗದ ಕಿಡ್ನಿ ನಾಪತ್ತೆಯಾಗಿರುವುದು ಕಂಡುಬಂತು. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

"ಇಡೀ ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯ ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ" ಎಂದು ಖಾಸ್‍ಗಂಜ್ ಸಿಡಿಓ ಸಚಿನ್ ಹೇಳಿದ್ದಾರೆ. ಆದರೆ ಈ ಬಗ್ಗೆ ಖಾಸಗಿ ಆಸ್ಪತ್ರೆಯಿಂದ ಯಾವುದೇ ಉತ್ತರ ಬಂದಿಲ್ಲ.

ಖಾಸ್‍ಗಂಜ್ ಜಿಲ್ಲೆಯ ನಗ್ಲಾ ತಾಲ್ ಗ್ರಾಮದ ಸುರೇಶ್ ಎ.14ರಂದು ಅಲ್ಟ್ರಾಸೌಂಡ್ ತಪಾಸಣೆ ಮಾಡಿಸಿಕೊಂಡಾಗ, ಕಿಡ್ನಿ ಕಲ್ಲು ಸಮಸ್ಯೆ ಇರುವುದು ಕಂಡುಬಂದಿದೆ. ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‍ನ ಬಿಲ್ಲಿಂಗ್ ಕೌಂಟರ್‍ನಲ್ಲಿದ್ದ ವ್ಯಕ್ತಿಯೊಬ್ಬರು ಅಲಿಗಢ ಬೈಪಾಸ್ ರಸ್ತೆಯಲ್ಲಿದ್ದ ಖಾಸಗಿ ಆಸ್ಪತ್ರೆಯೊಂದಕ್ಕೆ ತೆರಳಲು ಸಲಹೆ ಮಾಡಿದರು. ಎ. 14ರಂದು ಆಸ್ಪತ್ರೆಗೆ ದಾಖಲಾಗಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಕಿಡ್ನಿ ಕಲ್ಲು ತೆಗೆಯಲಾಗಿದೆ ಎಂದು ಹೇಳಿದ ವೈದ್ಯರು ಎ. 17ರಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ್ದರು.

ಅ. 29ರಂದು ತೀವ್ರ ಹೊಟ್ಟೆನೋವು ಕಾಣಿಸಿಕೊಂಡಾಗ ಮತ್ತೆ ವೈದ್ಯರನ್ನು ಸಂಪರ್ಕಿಸಿದಾಗ ಹೊಟ್ಟೆಯ ಎಡಭಾಗದಲ್ಲಿ ದೊಡ್ಡ ಶಸ್ತ್ರಚಿಕಿತ್ಸೆ ಗಾಯದ ಗುರುತು ಕಂಡ ವೈದ್ಯರು ಅಲ್ಟ್ರಾಸೌಂಡ್ ಪರೀಕ್ಷೆಗೆ ಸೂಚಿಸಿದರು. ವರದಿ ಬಂದಾಗ ನನ್ನ ಎಡಗಡೆಯ ಕಿಡ್ನಿ ಇಲ್ಲದಿರುವುದು ಕಂಡು ಆಘಾತವಾಯಿತು ಎಂದು ಸುರೇಶ್ ವಿವರಿಸಿದ್ದಾರೆ.

ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಆಸ್ಪತ್ರೆಯ ಸಿಬ್ಬಂದಿಯನ್ನು ಈ ಬಗ್ಗೆ ಕೇಳಿದಾಗ ಸೂಕ್ತ ಉತ್ತರ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಆ ಬಳಿಕ ಉನ್ನತ ಅಧಿಕಾರಿಗೆ ದೂರು ನೀಡಿದ್ದು, ಅವರು ತನಿಖೆಗೆ ಆದೇಶಿಸಿದ್ದಾರೆ.

Similar News