ನಕಲಿ ಖಾತೆಗಳ ಹಾವಳಿ ತಡೆಯಲು ಸಾಧ್ಯವಾಗದೆ $8 ಚಂದಾದಾರಿಕೆ ಸ್ಥಗಿತಗೊಳಿಸಿದ ಟ್ವಿಟರ್: ವರದಿ

Update: 2022-11-12 07:13 GMT

ಕ್ಯಾಲಿಫೋರ್ನಿಯಾ: ಪ್ರಮುಖ ಬ್ರ್ಯಾಂಡ್‌ಗಳ ಹಾಗೂ ಖ್ಯಾತನಾಮರ ಹೆಸರಿನಲ್ಲಿ ಇತರರು ತೆರೆಯುವ ನಕಲಿ ಖಾತೆಗಳನ್ನು (Fake Accounts) ಹತ್ತಿಕ್ಕುವ ಸಲುವಾಗಿ ದೃಢೀಕೃತ ಖಾತೆ-ಅಂದರೆ ಬ್ಲೂ ಟಿಕ್‌ ಹೊಂದಿರುವ ಖಾತೆಗೆ $8 ಚಂದಾದಾರಿಕೆ ಯೋಜನೆಯನ್ನು ($8 Subscription Program) ಇತ್ತೀಚೆಗಷ್ಟೇ ಆರಂಭಿಸಿದ್ದ ಟ್ವಿಟರ್(Twitter), ನಕಲಿ ಖಾತೆಗಳ ಹಾವಳಿ ತಡೆಯಲು ಸಾಧ್ಯವಾಗದೆ ಇದೀಗ ಅದನ್ನು ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ.

ಹಾಲಿ ಚಂದಾದಾರಿಕೆ ಪಡೆದವರು ತಮ್ಮ ಬ್ಲೂ ಟಿಕ್‌ ಖಾತೆಗೆ ಈಗಲೂ ಪ್ರವೇಶ ಹೊಂದಿರುತ್ತಾರೆಂದು ಹೇಳಲಾಗಿದೆ. ಟ್ವಿಟರ್‌ ಈ $8 ಚಂದಾದಾರಿಕೆ ರದ್ದುಗೊಳಿಸಿದ ವಿಚಾರವನ್ನು ಪ್ಲಾಟ್‌ಫಾರ್ಮರ್‌ ವೆಬ್‌ಸೈಟ್‌ ಮೊದಲು ವರದಿ ಮಾಡಿದೆ.

ಟ್ವಿಟರ್‌ ತನ್ನಲ್ಲಿರುವ ಹೈ-ಪ್ರೊಫೈಲ್‌ ಖಾತೆಗಳಿಗೆ 'ಅಧಿಕೃತ' ಬ್ಯಾಡ್ಚುಗಳನ್ನು ಮರುಸ್ಥಾಪಿಸಿದೆ. ಇದರಿಂದ ಪ್ರಮುಖ ಮಾಧ್ಯಮ ಸಂಸ್ಥೆಗಳು ಮತ್ತು ಉದ್ಯಮಗಳ ಖಾತೆಗಳಲ್ಲಿ ಪ್ರೊಫೈಲ್‌ಗಳ ಕೆಳಗೆ ಬೂದು ಬಣ್ಣದ ಬ್ಯಾಡ್ಜ್‌ಗಳು ಮತ್ತೆ ಕಾಣಿಸಿಕೊಂಡಿದೆ.

ದೃಢೀಕೃತ ಬ್ಲೂ ಟಿಕ್‌ ಮಾರ್ಕ್‌ಗಳನ್ನು ಪಡೆಯಲು $8 ಚಂದಾದಾರಿಕೆಯನ್ನು ಟ್ವಿಟರ್‌ ಘೋಷಿಸಿದ ಬೆನ್ನಲ್ಲೇ ನಕಲಿ ಖಾತೆಗಳ ಮಹಾಪೂರವನ್ನು ನಿಭಾಯಿಸುವುದು ಟ್ವಿಟರ್‌ಗೆ ಸವಾಲಾಗಿ ಬಿಟ್ಟಿದೆ. ಖ್ಯಾತ ಫಾರ್ಮಾ ಕಂಪೆನಿ ಎಲಿ ಲಿಲ್ಲಿ & ಕೋ. ಇದರ ನಕಲಿ ಖಾತೆ ತೆರೆದ ಯಾರೋ ಇನ್ಸುಲಿನ್‌ ಉಚಿತವಾಗಿ ದೊರೆಯುತ್ತದೆ ಎಂದು ಘೋಷಿಸಿ ಟ್ವೀಟ್‌ ಮಾಡಿದ ನಂತರ ಕಂಪೆನಿ ಕ್ಷಮೆಯಾಚಿಸಬೇಕಾಗಿ ಬಂದಿತ್ತು. ಟ್ವಿಟರ್‌ ಒಡೆಯ ಎಲಾನ್‌ ಮಸ್ಕ್‌ ಅವರ ಮಾಲಕತ್ವದ‌ ಟೆಸ್ಲಾ ಇಂಕ್‌. ಇದರ ನಕಲಿ ಖಾತೆ ತೆರೆದ ಯಾರೋ ಕಾರು ತಯಾರಿಕಾ ಕಂಪೆನಿಯ ಸುರಕ್ಷತೆಯನ್ನು ಅಪಹಾಸ್ಯಗೈದಿದ್ದ.

ಈ ರೀತಿ ನಕಲಿ ಖಾತೆಗಳನ್ನು ತಡೆಯಲು ಕೆಲ ಖಾತೆಗಳಿಗೆ ಅಧಿಕೃತ ಲೇಬಲ್‌ ಅಳವಡಿಸಲಾಗಿದೆ ಎಂದು ಟ್ವಿಟರ್‌ ಹೇಳಿತ್ತು. 

ಇದನ್ನೂ ಓದಿ: ಮುರುಘಾಶ್ರೀ ವಿರುದ್ಧ ದೂರು ನೀಡಿದ್ದ ಸಂತ್ರಸ್ತ ವಿದ್ಯಾರ್ಥಿನಿಯರ ತಾಯಿ ಬಂಧನ

Similar News