ಕೇವಲ 2.1ಕೋಟಿ ರೂ.ಗೆ ಸ್ಪೇನ್‌ನ ಗ್ರಾಮವೊಂದು ಮಾರಾಟಕ್ಕೆ !

Update: 2022-11-13 11:03 GMT

ಝಮೋರಾ: ಸಾಮಾನ್ಯವಾಗಿ ಹಲವಾರು ಮಂದಿ ತಮ್ಮ ಕನಸಿನ ಮನೆ, ಫ್ಲಾಟ್‌ ಅಥವಾ ವಿಲ್ಲಾಗಳನ್ನು ಖರೀದಿಸಬೇಕೆಂದು ಬಯಸುತ್ತಾರೆ. ಆದರೆ, ಯಾವತ್ತಾದರೂ ಸಂಪೂರ್ಣ ಗ್ರಾಮವೊಂದನ್ನು ಖರೀದಿಸುವ ಕನಸು ಯಾರಾದರೂ ಕಂಡಿರಬಹುದೇ? ಹಾಗಿದ್ದರೆ ಅವರಿಗೊಂದು ಸಿಹಿಸುದ್ದಿಯಿದೆ. ಸ್ಪೇನ್‌ ನಲ್ಲಿ ಗ್ರಾಮವೊಂದು 30 ವರ್ಷಗಳಿಂದ ಜನರಿಲ್ಲದೇ ಬಿಕೋ ಎನ್ನುತ್ತಿದ್ದು, ಈ ಗ್ರಾಮವನ್ನು ಇದೀಗ ಮಾರಾಟಕ್ಕಿಡಲಾಗಿದೆ. 227,000ಯೂರೋ(2,16,87,831 ರೂ.) ನಗದನ್ನು ನಿಗದಿಪಡಿಸಲಾಗಿದೆ. 

ಸಾಲ್ಟೊ ಡಿ ಕ್ಯಾಸ್ಟ್ರೊ ಎಂಬ ಹಳ್ಳಿಯು ಝಮೊರಾ ಪ್ರಾಂತ್ಯದ ಪೋರ್ಚುಗಲ್‌ನ ಗಡಿಯಲ್ಲಿದೆ. ಸ್ಪೇನ್‌ನ ಮ್ಯಾಡ್ರಿಡ್‌ನಿಂದ ಮೂರು ಗಂಟೆಗಳಷ್ಟು ಡ್ರೈವ್‌ ಮಾಡಿದರೆ ಇಲಲಿಗೆ ತಲುಪಬಹುದಾಗಿದೆ. ಈ ಗ್ರಾಮವು 44 ಮನೆಗಳು, ಹೋಟೆಲ್, ಚರ್ಚ್, ಶಾಲೆ, ಪುರಸಭೆಯ ಈಜುಕೊಳ ಮತ್ತು ಸಿವಿಲ್ ಗಾರ್ಡ್ ಅನ್ನು ಹೊಂದಿದ್ದ ಬ್ಯಾರಕ್‌ಗಳ ಕಟ್ಟಡವನ್ನು ಒಳಗೊಂಡಿದೆ ಎಂದು ವರದಿ ತಿಳಿಸಿದೆ.

"2000 ರ ದಶಕದ ಆರಂಭದಲ್ಲಿ, ಮಾಲಕರು ಈ ಹಳ್ಳಿಯನ್ನು ಜನಪ್ರಿಯ ಪ್ರವಾಸಿ ತಾಣವಾಗಿ ಪರಿವರ್ತಿಸುವ ಗುರಿಯೊಂದಿಗೆ ಖರೀದಿಸಿದರು. ಹೀಗಿದ್ದರೂ, ಯೂರೋಝೋನ್ ಬಿಕ್ಕಟ್ಟಿನಿಂದಾಗಿ ಯೋಜನೆಯು ಯಶಸ್ವಿಯಾಗಲು ಕಷ್ಟಕರವಾಯಿತು ಎಂದು ಗ್ರಾಮದ ಮಾಲಕರನ್ನು ಪ್ರತಿನಿಧಿಸುವ ಕಂಪನಿಯಾದ ರಾಯಲ್ ಇನ್ವೆಸ್ಟ್‌ನಲ್ಲಿ ಕೆಲಸ ಮಾಡುವ ರೋನಿ ರೋಡ್ರಿಗಸ್ ಬಿಬಿಸಿಗೆ ಹೇಳಿದರು. "ಮಾಲೀಕರು ಇಲ್ಲಿ ಹೋಟೆಲ್ ನಡೆಸುವ ಕನಸನ್ನು ಹೊಂದಿದ್ದರು ಆದರೆ ಅದನ್ನು ತಡೆಹಿಡಿಯಲಾಗಿದೆ. ಅವರು ಇನ್ನೂ ಯೋಜನೆಯು ನನಸಾಗಲು ಬಯಸುತ್ತಾರೆ" ಎಂದೂ ಹೇಳಿದ್ದಾರೆ.

ಆಸ್ತಿಯನ್ನು ಸ್ಪ್ಯಾನಿಷ್ ನಲ್ಲಿನ ಆಸ್ತಿ ಮಾರಾಟ ಮಾಡುವ ವೆಬ್‌ಸೈಟ್ ಐಡಿಯಲಿಸ್ಟಾದಲ್ಲಿ ಪಟ್ಟಿ ಮಾಡಲಾಗಿದೆ. "ನಾನು ನಗರವಾಸಿಯಾಗಿದ್ದು, ಮತ್ತು ಪಿತ್ರಾರ್ಜಿತ ಆಸ್ತಿಯನ್ನು ನೋಡಿಕೊಳ್ಳಲು ಸಾಧ್ಯವಿಲ್ಲದ ಕಾರಣ ನಾನು ಮಾರಾಟ ಮಾಡುತ್ತಿದ್ದೇನೆ" ಎಂದು ಮಾಲಿಕರು ಹೇಳಿದ್ದಾಗಿ ವೆಬ್‌ಸೈಟ್ ಮಾಲಕರನ್ನು ಉಲ್ಲೇಖಿಸುತ್ತದೆ.

"ಗ್ರಾಮವನ್ನು 100% ಕಾರ್ಯ ನಿರ್ವಹಿಸುವಂತೆ ಮಾಡಲು ಮತ್ತು ಲಾಭದಾಯಕವಾಗಲು ಅಗತ್ಯವಿರುವ ಹೂಡಿಕೆ ನಡೆಸುವುದಾದರೆ ಅದಕ್ಕಿರುವ ಖರ್ಚು 2 ಮಿಲಿಯನ್ ಯುರೋಗಳನ್ನು ಮೀರುವುದಿಲ್ಲ" ಎಂದು ವೆಬ್‌ಸೈಟ್ ಉಲ್ಲೇಖಿಸಿದೆ

ಈ ವೆಬ್‌ಸೈಟ್ ಪುಟವು 50,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಸ್ವೀಕರಿಸಿದೆ ಎಂದು ವರದಿಯಾಗಿದೆ. ಈ ಕುರಿತು ಬ್ರಿಟನ್, ಫ್ರಾನ್ಸ್, ಬೆಲ್ಜಿಯಂ ಮತ್ತು ರಷ್ಯಾದಿಂದ 300ಕ್ಕೂ ಹೆಚ್ಚು ಮಂದಿ ಆಸಕ್ತಿ ವ್ಯಕ್ತಪಡಿಸಿದ್ದಾರೆ. "ಒಬ್ಬ ಖರೀದಿದಾರರು ಅದನ್ನು ಕಾಯ್ದಿರಿಸಲು ಈಗಾಗಲೇ ಹಣ ನೀಡಿದ್ದಾರೆ" ಎಂದು ರೊಡ್ರಿಗಸ್ ಬಿಬಿಸಿಗೆ ತಿಳಿಸಿದರು.

Similar News