ದುರಾಡಳಿತ ಮಿತಿಮೀರಿದರೆ ಮಹಿಳೆಯರು ಸ್ಪೋಟಗೊಳ್ಳುತ್ತಾರೆ: ವೈದೇಹಿ
ಮಣಿಪಾಲ: ತಮ್ಮ ಮೇಲೆ ನಡೆಯುವ ದುರಾಡಳಿತದ ಬಗ್ಗೆ ಮಹಿಳೆಯರು ಮೌನವಿದ್ದರೂ ಒಂದು ಹಂತದ ನಂತರ ಸ್ಫೋಟಗೊಳ್ಳುತ್ತಾರೆ. ನನ್ನ ಸುತ್ತಲಿನ ಮಹಿಳೆಯರ ಜಗತ್ತು ಅವರ ವಿಧವಿಧದ ಬಳಲುವಿಕೆ ಪ್ರತಿಕ್ರಿಯಿ ಸಲು ಸಾಹಿತ್ಯವು ನನಗೆ ಅವಕಾಶ ನೀಡಿದೆ ಎಂದು ಲೇಖಕಿ ವೈದೇಹಿ ಹೇಳಿದ್ದಾರೆ.
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಯೋಜಿಸಲಾದ ‘ವೈದೇಹಿ ಜಗತ್ತು’ ಎರಡು ದಿನಗಳ ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಪ್ರತಿಯೊಂದು ಭಾಷೆಯ ಸಾಹಿತ್ಯವು ಆ ಭಾಷೆಯೊಂದಿಗೆ ಬೆರೆತಿರುವ ಸಂಸ್ಕೃತಿಯ ಸೂಕ್ಷ್ಮತೆಗಳನ್ನು ಸೆರೆ ಹಿಡಿಯುತ್ತದೆ. ಆದುದರಿಂದ ಪ್ರತಿಯೊಂದು ಭಾಷೆಯ ಸಾಹಿತ್ಯವೂ ಉಳಿಯಬೇಕು. ಹಾಗೆಯೇ ಕನ್ನಡ ಸಾಹಿ ತ್ಯವೂ ಉಳಿಯಬೇಕು ಎಂದು ಅವರು ತಿಳಿಸಿದರು.
ಅಮ್ಮಚ್ಚಿಯೆಂಬ ನೆನಪು ಚಿತ್ರದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ವೈದೇಹಿ, ಪುರುಷರ ಪ್ರಾಬಲ್ಯವಿರುವ ಜಗತ್ತಿನಲ್ಲಿ ಮಹಿಳಾ ನಿರ್ದೇಶಕಿ ಸಿನಿಮಾ ಮಾಡು ವುದು ಸುಲಭವಲ್ಲ. ನಿರ್ದೇಶಕಿ ಚಂಪಾ ಶೆಟ್ಟಿ ಸಿನಿಮಾ ಮಾಡುವ ಯೋಚನೆ ಬಗ್ಗೆ ಹೇಳಿದಾಗ ನಾನು ಒಪ್ಪಿಕೊಂಡೆ ಮತ್ತು ಅದು ಕೆಟ್ಟ ಚಿತ್ರವಾದರೂ ಸರಿ, ಸಿನಿಮಾ ಮಾಡು ಎಂದು ಹೇಳಿದ್ದೆ. ಕೊನೆಗೂ ಈ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ ಮತ್ತು ನನಗೆ ತುಂಬಾ ಇಷ್ಟವಾಗಿದೆ ಎಂದರು.
ಈ ಮೊದಲು ವೈದೇಹಿ ಅವರ ಸಣ್ಣ ಕಥೆಗಳನ್ನು ಆಧರಿಸಿದ ’ಅಮ್ಮಚ್ಚಿಯೆಂಬ ನೆನಪು’ ಚಿತ್ರ ಪ್ರದರ್ಶನ ಗೊಂಡಿತು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ನಿರ್ದೇಶಕಿ ಚಂಪಾ ಶೆಟ್ಟಿ, ಮೂಲ ಕಥೆಗೆ ನಿಷ್ಠರಾಗಿ ಉಳಿದು, ಚಿತ್ರದಲ್ಲಿ ಕಥೆಗಳ ಸೂಕ್ಷ್ಮವನ್ನು ಹೊರತರುವ ಪ್ರಯತ್ನ ಮಾಡಿದ್ದೇವೆ. ಚಿತ್ರ ನೋಡಿದ ನಂತರ ತಾವು ಮಹಿಳೆಯರನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ ಎಂದು ಜನರು ನನಗೆ ಹೇಳಿದ್ದಾರೆ. ಅದೇ ಚಿತ್ರದ ಯಶಸ್ಸು ಎಂದರು. ಗೀತಾ ಸುರತ್ಕಲ್, ಪ್ರಕಾಶ್ ಶೆಟ್ಟಿ, ಡಾ.ರಾಧಾಕೃಷ್ಣ ಉರಾಳ್ ಮತ್ತಿತರರು ಚರ್ಚೆಯಲ್ಲಿದ್ದರು.
ವೈದೇಹಿ ಅವರ ಅಸ್ಪೃಷ್ಯರು ಕಾದಂಬರಿ ಕುರಿತು ಮಾತನಾಡಿದ ಪ್ರೊ.ಎನ್ ಮನು ಚಕ್ರವರ್ತಿ, ಕಾದಂಬರಿಯಲ್ಲಿ ದಲಿತ ಜಗತ್ತಿನ ಪ್ರಶ್ನೆಗಳ ಸಂಕೀರ್ಣ ಅನ್ವೇಷಣೆಯನ್ನು ಗಮನಿಸಬಹುದು. ಈ ಕಾದಂಬರಿಯನ್ನು ಶಿವರಾಮ ಕಾರಂತ ಅವರ ಚೋಮನ ದುಡಿ ಮತ್ತು ಅನಂತಮೂರ್ತಿ ಅವರ ಭಾರತೀಪುರ ದೊಂದಿಗೆ ನಿರ್ದಿಷ್ಟ ಸಮೀಕರಣ ಹೊಂದಿದೆ ಎಂದರು.
ಅಧ್ಯಕ್ಷತೆಯನ್ನು ಮಾಹೆ ಉಪಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ವಹಿಸಿ ದ್ದರು. ಬಿಹಾರ ಕೆಎಸ್‌ಡಿಎಸ್‌ಯು ಇದರ ಮಾಜಿ ಕುಲಪತಿ ಡಾ.ನೀಲಿಮಾ ಸಿನ್ಹಾ ಮಾತನಾಡಿದರು. ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ ನಾವು ಜೇನ್ ಆಸ್ಟಿನ್ ಮತ್ತು ವರ್ಜೀನಿಯಾ ವೂಲ್ಫ್ ಅವರನ್ನು ಮಾತ್ರ ಅಧ್ಯಯನ ಮಾಡಿ, ವೈದೇಹಿ ಬಗ್ಗೆ ಅಧ್ಯಯನ ನಡೆಸದೆ ಹೋದರೆ ಅದು ಪ್ರಮಾದವೇ ಸರಿ ಎಂದರು.
ಸಾಹಿತ್ಯಕ್ಕೆ ವೈದೇಹಿ ಅವರು ನೀಡಿದ ಕೊಡುಗೆಯನ್ನು, ವಿಶೇಷವಾಗಿ ಡಾ. ಟಿ ಎಂ ಪೈ- ಸಾಹಿತ್ಯ ಪೀಠಕ್ಕೆ ಅವರ ಕೊಡುಗೆಯನ್ನು ಸ್ಮರಿಸಿದರು. ಇದೇ ಸಂದರ್ಭದಲ್ಲಿ ವೈದೇಹಿ ಅವರನ್ನು ಸನ್ಮಾಸಲಾಯಿತು. ಜಿಸಿಪಿಎಎಸ್ ವಿದ್ಯಾರ್ಥಿ ಗಳಾದ ಸಾಗರ್, ಶ್ರವಣ್, ಸಂಪದಾ, ಮತ್ತು ವೆಲಿಕಾ ಕಾರ್ಯಕ್ರಮ ಸಂಯೋಜಿಸಿದರು.