ಪುಟಿನ್ ವಿರುದ್ಧ ದಂಗೆಗೆ ತೆರೆಮರೆಯಲ್ಲಿ ಸಿದ್ಧತೆ?: ರಶ್ಯ ರಾಜಕೀಯ ತಜ್ಞರ ಹೇಳಿಕೆ

Update: 2022-11-13 16:20 GMT

ಮಾಸ್ಕೊ, ನ.13: ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಶ್ಯಕ್ಕೆ ನಿರೀಕ್ಷಿತ ಮುನ್ನಡೆ ಸಾಧ್ಯವಾಗದಿರುವುದರಿಂದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ತೀವ್ರ ಅಸಮಾಧಾನಗೊಂಡಿರುವ ಉನ್ನತ ಅಧಿಕಾರಿಗಳು ಅಧ್ಯಕ್ಷರ ಆದೇಶ ಪಾಲನೆಯಲ್ಲಿ ಉದಾಸೀನ ತೋರುತ್ತಿದ್ದಾರೆ. ರಶ್ಯದಲ್ಲಿ ಪುಟಿನ್ ವಿರುದ್ಧದ ದಂಗೆಗೆ ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ ಎಂದು ರಶ್ಯದ ಪ್ರಮುಖ ರಾಜಕೀಯ ವಿಶ್ಲೇಷಕ ಕಿರಿಲ್ ರೊಗೋವ್‌ರನ್ನು ಉಲ್ಲೇಖಿಸಿ 'ದಿ ಮಿರರ್' ವರದಿ ಮಾಡಿದೆ.

ನಿರ್ಣಯ ಮಾಡುವಲ್ಲಿ, ನಿರ್ಧಾರ ಜಾರಿಯಲ್ಲಿ ರಶ್ಯ ಅಧ್ಯಕ್ಷರ ಕೈಕಟ್ಟಿದಂತಾಗಿದೆ. ಅಧಿಕಾರಿಗಳು ಅವರ ವಿರುದ್ಧ ಷಡ್ಯಂತ್ರ ನಡೆಸುತ್ತಿರುವ ಲಕ್ಷಣ ತೋರುತ್ತಿದೆ. ಪುಟಿನ್ ಅವರ ಪ್ರಬಲ ಭದ್ರತಾ ಪಡೆ ಅವರ ರಕ್ಷಣೆಗೆ ಇರುವುದರಿಂದ, ಈ ಹಿಂದಿನ ಕಾಲದಲ್ಲಿ ನಡೆಯುತ್ತಿರುವಂತೆ ಅರಮನೆಯಲ್ಲಿ ದಂಗೆ ನಡೆಯದಿದ್ದರೂ ಅಂತಿಮವಾಗಿ ಪುಟಿನ್ ವಿರುದ್ಧದ ನಡೆ ಪ್ರಬಲವಾಗುವ ಸಾಧ್ಯತೆಯಿದೆ. ಇತ್ತೀಚೆಗೆ ಉಕ್ರೇನ್‌ನಲ್ಲಿ, ಅದರಲ್ಲೂ ವಿಶೇಷವಾಗಿ ಖೆರ್ಸಾನ್‌ನಲ್ಲಿ ರಶ್ಯಕ್ಕೆ ಆದ ಹಿನ್ನಡೆಯಿಂದ ಪುಟಿನ್ ಅವರ ಅಧಿಕಾರಕ್ಕೆ ಬೆದರಿಕೆಯುಂಟಾಗಿದೆ ಎಂದು ಕಿರಿಲ್ ಹೇಳಿದ್ದಾರೆ.

ತೆರೆಮರೆಯಲ್ಲಿ ಪಿತೂರಿ ನಡೆಯುತ್ತಿರಬಹುದು. ನಿರ್ಧಾರಗಳ ನಾಶವು ಇದರ ಒಂದು ಭಾಗವಾಗಿರಬಹುದು. ನಿರ್ಧಾರಗಳನ್ನು ಕಾರ್ಯಗತಗೊಳಿಸಲು ನಿರಾಕರಣೆ ಹೆಚ್ಚಿನ ಅಪಾಯಗಳನ್ನು ಸೂಚಿಸುವುದಿಲ್ಲ. ಆದರೆ ಇದು ಪುಟಿನ್ ಅವರ ಆಡಳಿತವನ್ನು ದುರ್ಬಲಗೊಳಿಸುವಲ್ಲಿ ಪರಿಣಾಮಕಾರಿಯಾಗಿದೆ. ಅಸಮಾಧಾನವನ್ನು ವ್ಯಕ್ತಪಡಿಸಲು ಗಣ್ಯರ ಒಂದು ಗುಂಪು ಧೈರ್ಯಮಾಡಿದರೆ, ಆಗ ಆ ನಿರ್ಧಾರ ಒಂದು ಪಿತೂರಿಯಾಗಿ ರೂಪುಗೊಳ್ಳಬಹುದು. ಇದು ಗುಪ್ತ ರೀತಿಯಲ್ಲಿ ನಡೆಯುತ್ತದೆ.

ಈ ಹಿಂದೆ ಇನ್‌ಸ್ಟಿಟ್ಯೂಟ್ ಫಾರ್ ಇಕನಾಮಿಕ್ ಪಾಲಿಸಿ, ಹಾಗೂ ರಶ್ಯನ್ ಪ್ರೆಸಿಡೆನ್ಶಿಯಲ್ ಅಕಾಡೆಮಿ ಆಫ್ ನ್ಯಾಷನಲ್ ಇಕಾನಮಿ ಆ್ಯಂಡ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಪ್ರಮುಖ ಸಂಶೋಧಕರಾಗಿದ್ದ ಕಿರಿಲ್ ಪ್ರಸ್ತುತ ಇಂಡೆಮ್ ಪ್ರತಿಷ್ಟಾನದಲ್ಲಿ ಹಿರಿಯ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಧ್ಯಕ್ಷರ ಕಚೇರಿಗೆ ತೆರಳಿ ಅಧ್ಯಕ್ಷರ ಭದ್ರತಾ ಪಡೆಯನ್ನು ಹೊಡೆದುರುಳಿಸುವಷ್ಟು ಬಲಶಾಲಿಯಾಗುವ ಅಗತ್ಯವಿಲ್ಲ. ಅಧ್ಯಕ್ಷರ ಭದ್ರತಾ ಪಡೆ ನಿಮ್ಮನ್ನು ಬಂಧಿಸಲು ಅವಕಾಶ ನೀಡದಷ್ಟು ಬಲವಿದ್ದರೆ ಸಾಕಾಗುತ್ತದೆ. ಇದನ್ನು ಮಾಡಬಹುದು ಎಂದು ಇತರ ಎಲ್ಲರೂ ಭಾವಿಸುತ್ತಾರೆ ಮತ್ತು ಅಹಿತಕರ ಸಂಗತಿಗಳು ಸಂಭವಿಸಲು ಆರಂಭವಾಗುತ್ತದೆ ಎಂದು ಕಿರಿಲ್ ರೊಗೊವ್ ಹೇಳಿದ್ದಾರೆ.

ಪುಟಿನ್ ಪದಚ್ಯುತಿಗೆ ಕರೆ

ಈ ಮಧ್ಯೆ, ಪುಟಿನ್ ಅವರ ಮೆದುಳು ಎಂದೇ ಹೆಸರಾಗಿರುವ, ರಶ್ಯದ ಅತ್ಯಂತ ಪ್ರಭಾವೀ ವ್ಯಕ್ತಿ ಎನಿಸಿಕೊಂಡಿರುವ ಅಲೆಕ್ಸಾಂಡರ್ ಡ್ಯುಗಿನ್ ಅಧ್ಯಕ್ಷ ಪುಟಿನ್ ಪದಚ್ಯುತಿಗೆ ಕರೆ ನೀಡಿದ್ದಾರೆ. ಖೆರ್ಸಾನ್‌ನಲ್ಲಿ ರಶ್ಯಕ್ಕೆ ಎದುರಾಗಿರುವ ಅವಮಾನಕಾರಿ ಸೋಲಿನ ಬಳಿಕ ಪುಟಿನ್ ಅವರನ್ನು ಹತ್ಯೆ ಮಾಡುವ ಸಾಧ್ಯತೆಯೂ ಇದೆ ಎಂದು ಡ್ಯುಗಿನ್ ಹೇಳಿರುವುದಾಗಿ 'ದಿ ಮಿರರ್' ವರದಿ ಮಾಡಿದೆ.

ಪುಟಿನ್ ಪರಮಾಪ್ತ ಎಂದು ಗುರುತಿಸಿಕೊಂಡಿದ್ದ ಡ್ಯುಗಿನ್ ಟೆಲಿಗ್ರಾಂ ಚಾನೆಲ್‌ನಲ್ಲಿ ಪುಟಿನ್ ಅವರ ವಿಫಲ ಉಕ್ರೇನ್ ಆಕ್ರಮಣದ ಬಗ್ಗೆ ಮಾತನಾಡಿದ್ದಾರೆ. ಉಕ್ರೇನ್‌ನಲ್ಲಿನ ಪರಿಸ್ಥಿತಿ ಬಗ್ಗೆ ಮಾತನಾಡುತ್ತಾ, ನಿಜವಾದ ರಶ್ಯನ್ನರು ಈಗ ದುಃಖಿಸಬೇಕು . ರಶ್ಯ ಖೆರ್ಸಾನ್‌ಗೆ ಶರಣಾಗಿದೆ ಮತ್ತು ಈ ಸೋಲಿನ ಬಗ್ಗೆ ಅಸಮಾಧಾನಗೊಳ್ಳದವರು ರಶ್ಯನ್ನರೇ ಅಲ್ಲ' ಎಂದು ಹೇಳಿಕೆ ನೀಡಿದ್ದರು. ಬಳಿಕ ಹೇಳಿಕೆಯನ್ನು ಡಿಲೀಟ್ ಮಾಡಲಾಗಿದೆ ಎಂದು ವರದಿಯಾಗಿದೆ. 

Similar News