ಕರಾವಳಿ 3 ಜಿಲ್ಲೆಗಳಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಲು ಅನುಮತಿ; ಭತ್ತ ಕಿಲೊ 25.40 ರೂ. ಬೆಂಬಲ ಬೆಲೆ

Update: 2022-11-14 17:33 GMT

ಉಡುಪಿ, ನ.14: 2022-23ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ರೈತರಿಂದ ಸ್ಥಳೀಯವಾಗಿ ಬೆಳೆಯುವ ಭತ್ತದ ತಳಿಗಳ ಭತ್ತವನ್ನು ಖರೀದಿಸಲು ಖರೀದಿ ಕೇಂದ್ರ ಆರಂಭಿಸಲು ಹಾಗೂ ಭತ್ತಕ್ಕೆ ಕಿಲೊ ರೂ. 25.40 ನಿಗದಿ ಮಾಡಿ ಇಂದು ಸರಕಾರ ಆದೇಶ ಹೊರಡಿಸಿದೆ.

2022-23ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರವು ನಿಗಧಿಪಡಿಸಿರುವಂತೆ ರಾಜ್ಯದ ರೈತರಿಂದ 5 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು, ಸಾಮಾನ್ಯ ಭತ್ತವನ್ನು ಪ್ರತಿ ಕ್ವಿಂಟಲ್ ರೂ. 2040.00 ದರದಲ್ಲಿ, ಗ್ರೇಡ್ ಎ ಭತ್ತವನ್ನು ಪ್ರತಿ ಕ್ವಿಂಟಲ್ ರೂ. 2060.00 ದರದಲ್ಲಿ ಹಾಗೂ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬೆಳೆಯಲಾಗುವ ಸ್ಥಳೀಯ ತಳಿಗಳ ಭತ್ತವನ್ನು ಸಾಮಾನ್ಯ ಭತ್ತಕ್ಕೆ ನಿಗಧಿಪಡಿಸಿದ ದರ ರೂ. 2040.00 ದರದಲ್ಲಿ ಖರೀದಿಸಲು ಆದೇಶಿಸಲಾಗಿದೆ.

ಈ ಜಿಲ್ಲೆಗಳ ರೈತರಿಂದ ಖರೀದಿಸಲಾಗುವ ಸ್ಥಳೀಯ ತಳಿಗಳ ಭತ್ತಕ್ಕೆ ಪ್ರತಿ ಕ್ವಿಂಟಲ್ ಗೆ ರೂ. 500.00 ಪ್ರೋತ್ಸಾಹಕ ಧನವನ್ನು ನೀಡಲು  ಆದೇಶದಲ್ಲಿ ತಿಳಿಸಲಾಗಿದೆ.

2022 - 23ನೇ ಸಾಲಿನಲ್ಲಿ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸ್ಥಳೀಯವಾಗಿ ಬೆಳೆಯಲಾಗುವ ಭತ್ತದ ತಳಿಗಳಾದ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ, ಉಮಾ, ಅಭಿಲಾಷ ಮತ್ತು ಎಂ ಫೋರ್ ತಳಿಗಳ ಭತ್ತವನ್ನು ಸದರಿ ಜಿಲ್ಲೆಗಳ ರೈತರಿಂದ ಖರೀದಿಸಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತವನ್ನು ನೇಮಿಸಲಾಗಿದೆ. 

ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್ ಸಮಿತಿಯ ನಿರ್ದೇಶನ, ಸೂಚನೆ ಮತ್ತು ಆದೇಶಗಳನ್ವಯ ಖರೀದಿ ಪ್ರಕ್ರಿಯೆಯನ್ನು ಖರೀದಿ ಏಜೆನ್ಸಿಯು ಕೈಗೊಳ್ಳಲು ಆದೇಶದಲ್ಲಿ ಸೂಚಿಸಲಾಗಿದೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಖರೀದಿಸಲಾಗುವ ಭತ್ತಕ್ಕೆ ಸಂಬಂಧಿಸಿದಂತೆ ದಿನಾಂಕ 15-11-2022 ರಿಂದ ದಿನಾಂಕ 18-11-2022 ರ ಒಳಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್ ಸಮಿತಿ ಸಭೆಯನ್ನು ನಡೆಸಿ ಖರೀದಿಗೆ ಸಂಬಂಧಿಸಿದ ಅಗತ್ಯ ಪ್ರಕ್ರಿಯೆಗಳನ್ನು ಕೂಡಲೇ ಪ್ರಾರಂಭಿಸಿ ಖರೀದಿ ಏಜೆನ್ಸಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತವು ಅಗತ್ಯಕ್ಕೆ ತಕ್ಕಂತೆ ಜಿಲ್ಲೆಗಳಿಗೆ ಕನಿಷ್ಠ 20 ಖರೀದಿ ಕೇಂದ್ರಗಳನ್ನು ತೆರೆದು ದಿನಾಂಕ 21-11-2022 ರಿಂದ ದಿನಾಂಕ 21-12-2022 ರವರೆಗೆ ರೈತರ ನೋಂದಣಿ ಕಾರ್ಯವನ್ನು ಹಾಗೂ ದಿನಾಂಕ 01-12-2022 ರಿಂದ ದಿನಾಂಕ 28-02-2023ರ ಅವಧಿಯವರೆಗೆ ಭತ್ತ ಖರೀದಿ ಕಾರ್ಯಗಳನ್ನು ಕೈಗೊಳ್ಳಲು ಆದೇಶದಲ್ಲಿ ಸೂಚಿಸಲಾಗಿದೆ.

ಸರಕಾರದ ಆದೇಶದಂತೆ ಅತಿ ಶೀಘ್ರದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಭತ್ತ ಖರೀದಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಶಾಸಕ ರಘುಪತಿ ಭಟ್ ಅವರು ತಿಳಿಸಿದ್ದಾರೆ.

ಈ ಆದೇಶ ಹೊರಡಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಈ ಆದೇಶ ಹೊರಡಿಸುವಲ್ಲಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಶಾಸಕ ಕೆ. ರಘುಪತಿ ಭಟ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Similar News