ಮಂಗಳೂರು; ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಟ್ಯಾಕ್ಸಿ- ಮ್ಯಾಕ್ಸಿ ಕ್ಯಾಬ್‌ನವರಿಂದ ಪ್ರತಿಭಟನೆ

Update: 2022-11-15 10:36 GMT

ಮಂಗಳೂರು, ನ. 15: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಶನ್ ವತಿಯಿಂದ ಮಂಗಳೂರಿನ ಆರ್‌ಟಿಓ ಕಚೇರಿ ಎದುರು ಇಂದು ಪ್ರತಿಭಟನೆ ನಡೆಯಿತು.

ದ.ಕ. ಟ್ಯಾಕ್ಸಿಮೆನ್ಸ್ ಹಾಗೂ ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ಅಧ್ಯಕ್ಷ ಎಂ.ದಿನೇಶ್ ಕುಂಪಲ ಮಾತನಾಡಿ, ಸಾರಿಗೆ ಇಲಾಖೆಯ ಪರವಾನಿಗೆಯನ್ನು ಪಡೆಯದೆ, ವಿಶೇಷ ತೆರಿಗೆಯನ್ನೂ ಪಾವತಿಸದೆ ಕೆಎಸ್‌ಆರ್‌ಟಿಸಿಯು ದೀಪಾವಳಿ ಪ್ಯಾಕೇಜ್ ಪ್ರವಾಸ ಬಸ್ ಮಾಡಿರುವುದು ಖಂಡನೀಯ ಎಂದರು.

ಈ ಪ್ಯಾಕೇಜ್ ಬಸ್‌ಗಳಿಂದ ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್‌ಗಳ ಬಾಡಿಗೆಗೆ ಹೊಡೆತ ಬೀಳುತ್ತದೆ. ತೆರಿಗೆ ಪಾವತಿಸಿ ಕಾರ್ಯನಿರ್ವಹಿಸುತ್ತಿರುವವರಿಗೆ ನಷ್ಟ ಉಂಟಾಗುತ್ತಿದೆ ಎಂದು ಅವರು ಹೇಳಿದರು.

ಸರಕಾರ ಮತ್ತು ಖಾಸಗಿ ಕಂಪನಿಗಳು ಟೂರಿಸ್ಟ್ ವಾಹನ ಗುತ್ತಿಗೆ ಪಡೆಯುವಾಗ ನಮ್ಮ ಜಿಲ್ಲೆಯ ಸ್ಥಳೀಯ ವಾಹನವನ್ನೇ ಪರಿಗಣಿಸಬೇಕು. ಟ್ಯಾಕ್ಸಿಗೆ ಸಿಗಬೇಕಾದ ಬಾಡಿಗೆಯನ್ನು ಸಿಟಿ ಪರವಾನಗಿ ಹೊಂದಿದ ಆಟೋರಿಕ್ಷಾದವರು ಸಿಟಿಯನ್ನು ಬಿಟ್ಟು ಹೊರ ಜಿಲ್ಲೆಗೆ ಬಾಡಿಗೆ ಮಾಡುವುದನ್ನು ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.

ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ಪರವಾನಗಿ ರಹಿತ ಮತ್ತು ಸಮಯ ಪರಿಪಾಲನೆ ಮಾಡದೆ ಬಸ್‌ಗಳು ಟ್ರಿಪ್ ಮಾಡುವುದು ಖಂಡನೀಯ ಎಂದು ಪ್ರತಿಭಟನಾ ನಿರತರು ಅಸಮಾದಾನ ವ್ಯಕ್ತಪಡಿಸಿದರು.

ಸುರತ್ಕಲ್ ಟೋಲ್ ಸಂಪೂರ್ಣ ರದ್ದಾಗಬೇಕು. ಮ್ಯಾಕ್ಸಿ ಕ್ಯಾಬ್ ವಾಹನಗಳಿಗೆ ಪೊಲೀಸರಿಂದ ಆಗುತ್ತಿರುವ ಕಿರುಕುಳ ತಪ್ಪಿಸಬೇಕು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಪಾರ್ಕಿಂಗ್ ದರವನ್ನು ದುಪ್ಪಟ್ಟು ಮಾಡಲಾಗಿದೆ. ಇಲ್ಲಿ ಖಾಸಗಿ ವಾಹನಗಳಿಗೆ ಮೊದಲಿನ 10 ನಿಮಿಷ ಉಚಿತ ಎಂಬ ನಾಮಲಕ ಅಳವಡಿಸಿ ಟ್ಯಾಕ್ಸಿ ವಾಹನಗಳಿಗೆ ಮಾತ್ರ ಟಿಕೆಟ್ ನೀಡಿ ಒಂದು ನಿಮಷದಲ್ಲಿ ಹೊರಗೆ ಹೋದರೂ 90 ರೂ. ಪಾವತಿಸಬೇಕಾಗಿರುವುದು ನಮಗೆ ಬಹುನಷ್ಟ ಉಂಟಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಯಿತು.

ಪ್ರಧಾನ ಕಾರ್ಯದರ್ಶಿ ಕೆ., ಕಾರ್ಯಾಧ್ಯಕ್ಷ ಪ್ರಮೋದ್ ಉಳ್ಳಾಲ್, ಸಂಘಟನಾ ಕಾರ್ಯದರ್ಶಿ ಉದಯ ಕುಮಾರ್, ಕೋಶಾಧಿಕಾರಿ ಸುರೇಶ್ ಕುಮಾರ್, ಸಹಕಾರ್ಯದರ್ಶಿ ಕರುಣಾಕರ ಕುಂಟಿಕಾನ, ನಿಕಟಪೂರ್ವ ಕಾರ್ಯದರ್ಶಿ ಕಮಲಾಕ್ಷ, ಉಪಾಧ್ಯಕ್ಷರಾದ ಹರೀಶ್ ಶೆಟ್ಟಿ ಕುತ್ತಾರ್, ದಿನೇಶ್ ಬಂಗೇರ, ನಾಗಪ್ಪ ಅಡ್ಯಾರ್, ಕಾರ್ಯದರ್ಶಿ ಲತೀಫ್ ಮುಂತಾದವರು ನೇತೃತ್ವ ವಹಿಸಿದ್ದರು.

Similar News