ಅಕ್ರಮ ಹಣ ವರ್ಗಾವಣೆ ಪ್ರಕರಣ: ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ಗೆ ಜಾಮೀನು

Update: 2022-11-15 15:43 GMT

 ಹೊಸದಿಲ್ಲಿ, ನ. 15: ವಂಚನೆ ಆರೋಪಿ ಸುಕೇಶ್ ಚಂದ್ರಶೇಖರ್ ಭಾಗಿಯಾಗಿರುವ 200 ಕೋ. ರೂ. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ಗೆ ದಿಲ್ಲಿ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದೆ. ತನಿಖೆ ಈಗಾಗಲೇ ಪೂರ್ಣಗೊಂಡಿರುವುದರಿಂದ ಹಾಗೂ ಆರೋಪ ಪಟ್ಟಿ ಸಲ್ಲಿಸಿರುವುದರಿಂದ ತನ್ನನ್ನು ಕಸ್ಟಡಿಯಲ್ಲಿ ಇರಿಸುವ ಅಗತ್ಯ ಇಲ್ಲ ಎಂಬ ನೆಲೆಯಲ್ಲಿ ಫೆರ್ನಾಂಡಿಸ್ ಅವರು ಜಾಮೀನು ಕೋರಿದ್ದರು. 

ಜಾರಿ ನಿರ್ದೇಶನಾಲಯ ಸಲ್ಲಿಸಿದ ಪೂರಕ ಆರೋಪ ಪಟ್ಟಿಯನ್ನು ನ್ಯಾಯಾಲಯ ಆಗಸ್ಟ್ 31ರಂದು ಸ್ವೀಕರಿಸಿತ್ತು ಹಾಗೂ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಫೆರ್ನಾಂಡಿಸ್ ಅವರಿಗೆ ಸೂಚಿಸಿತ್ತು.

ತನಿಖೆಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯದಿಂದ ಹಲವು ಬಾರಿ ಸಮನ್ಸ್ ಸ್ವೀಕರಿಸಿದ್ದ ಫೆರ್ನಾಂಡಿಸ್ ಪೂರಕ ಆರೋಪ ಪಟ್ಟಿಯಲ್ಲಿ ಮೊದಲ ಬಾರಿಗೆ ಆರೋಪಿ ಎಂದು ಉಲ್ಲೇಖಗೊಂಡಿದ್ದಾರೆ. ಈ ಹಿಂದೆ ಜಾರಿ ನಿರ್ದೇಶನಾಲಯ ಸಲ್ಲಿಸಿದ ಆರೋಪ ಪಟ್ಟಿ ಹಾಗೂ ಪೂರಕ ಆರೋಪ ಪಟ್ಟಿಯಲ್ಲಿ ಫೆರ್ನಾಂಡಿಸ್ ಅವರನ್ನು ಆರೋಪಿ ಎಂದು ಉಲ್ಲೇಖಿಸಿರಲಿಲ್ಲ.

Similar News