ತನ್ನನ್ನು ಟೀಕಿಸಿದ್ದ ಟ್ವಿಟರ್ ಇಂಜಿನಿಯರ್‌ಗಳನ್ನು ಬಹಿರಂಗವಾಗಿ ಶಿಕ್ಷಿಸಿದ ಎಲಾನ್ ಮಸ್ಕ್

Update: 2022-11-15 11:32 GMT

ಹೊಸದಿಲ್ಲಿ: ತನ್ನನ್ನು ‘ವಾಕ್ ಸ್ವಾತಂತ್ರದ ಪ್ರತಿಪಾದಕ’ ಎಂದು ಕರೆದುಕೊಳ್ಳುವ ಟ್ವಿಟರ್ (Twitter) ಮಾಲಕ ಎಲಾನ್ ಮಸ್ಕ್ (Elon Musk) ಅವರು ಸಾಮಾಜಿಕ ಮಾಧ್ಯಮಗಳಲ್ಲಿ ತನ್ನನ್ನು ಬಹಿರಂಗವಾಗಿ ಟೀಕಿಸುವ ಕಂಪನಿಯ ಇಂಜಿನಿಯರ್‌ಗಳನ್ನು ವಜಾ ಮಾಡತೊಡಗಿದ್ದಾರೆ.

ಒಂದು ಪ್ರಕರಣದಲ್ಲಿ ಮಸ್ಕ್ ಇಂಜಿನಿಯರ್‌ವೋರ್ವರನ್ನು ವಜಾಗೊಳಿಸಿದ್ದನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ, ತಾನು ಬಹಿರಂಗವಾಗಿ ಮಸ್ಕ್‌ರನ್ನು ಖಂಡಿಸಿದ ಬಳಿಕ ತನ್ನನ್ನು ವಜಾಗೊಳಿಸಲಾಗಿತ್ತು ಎಂದು ಮಾಜಿ ಉದ್ಯೋಗಿಯೋರ್ವರು ಹೇಳಿದ್ದಾರೆ.

ಆ್ಯಂಡ್ರಾಯ್ಡ್ ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ಗಾಗಿ ಟ್ವಿಟರ್‌ನ ಆ್ಯಪ್ ಅಭಿವೃದ್ಧಿಯಲ್ಲಿ ಶ್ರಮಿಸಿದ್ದ ಇಂಜಿನಿಯರ್ ಎರಿಕ್ ಫ್ರಾನ್‌ಹೋಫರ್ ಅವರು ಮಸ್ಕ್‌ರ ಟ್ವೀಟ್‌ವೊಂದನ್ನು ಮರುಪೋಸ್ಟ್ ಮಾಡಿದ್ದು, ಜೊತೆಗೆ ಟ್ವಿಟರ್ ಆ್ಯಪ್‌ನ ತಾಂತ್ರಿಕತೆಯ ಬಗ್ಗೆ ಮಸ್ಕ್ ಅವರ ತಿಳುವಳಿಕೆ ತಪ್ಪು ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮಸ್ಕ್ ಫ್ರಾನ್‌ಹೋಫರ್‌ರಿಂದ ವಿವರಣೆಯನ್ನು ಕೇಳಿದ್ದು, ಟ್ವಿಟರ್ ಆ್ಯಪ್ ಆ್ಯಂಡ್ರಾಯ್ಡ್ ನಲ್ಲಿ ತುಂಬ ನಿಧಾನವಾಗಿದೆ. ಅದನ್ನು ಸರಿಪಡಿಸಲು ನೀವೇನು ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ತನ್ನ ಆಲೋಚನೆಯನ್ನು ಹಲವಾರು ಟ್ವೀಟ್‌ಗಳಲ್ಲಿ ವಿವರಿಸಲು ಪ್ರಯತ್ನದ ಬಳಿಕ ಫ್ರಾನ್‌ಹೋಫರ್‌ರನ್ನು ಇನ್ನೋರ್ವ ಬಳಕೆದಾರ, ‘ನೀವು ನಿಮ್ಮ ಮರುಮಾಹಿತಿಯನ್ನು ಮಸ್ಕ್ ಜೊತೆ ಖಾಸಗಿಯಾಗಿ ಏಕೆ ಶೇರ್ ಮಾಡಿಕೊಂಡಿರಲಿಲ್ಲ’ ಎಂದು ಪ್ರಶ್ನಿಸಿದ್ದರು. ‘ಬಹುಶಃ ಅವರು ಖಾಸಗಿಯಾಗಿ ಪ್ರಶ್ನೆಗಳನ್ನು ಕೇಳಬೇಕು, ಇದಕ್ಕಾಗಿ ಸ್ಲಾಕ್ ಅಥವಾ ಇಮೇಲ್ ಬಳಸಬಹುದು’ ಎಂದು ಎಂಟು ವರ್ಷಗಳಿಗೂ ಅಧಿಕ ಸಮಯ ಟ್ವಿಟರ್‌ನಲ್ಲಿ ಕೆಲಸ ಮಾಡಿರುವ ಫ್ರಾನ್‌ಹೋಪರ್ ಉತ್ತರಿಸಿದ್ದರು.

ಫ್ರಾನ್‌ಹೋಫರ್‌ರನ್ನು ಕೆಲಸದಿಂದ ವಜಾ ಮಾಡಿರುವುದನ್ನು ಮಸ್ಕ್ ಸೋಮವಾರ ಬೆಳಿಗ್ಗೆ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.

ಮಸ್ಕ್‌ರನ್ನು ಟ್ವೀಟಿಸಿದ್ದಕ್ಕಾಗಿ ಇನ್ನೋರ್ವ ಇಂಜಿನಿಯರ್ ಬೆನ್ ಲೀಬ್ ಅವರನ್ನೂ ವಜಾ ಮಾಡಲಾಗಿದೆ. ಮಸ್ಕ್ ಅವರ ಅದೇ ತಾಂತ್ರಿಕ ಪೋಸ್ಟ್‌ನ್ನು ಮರುಟ್ವೀಟ್ ಮಾಡಿರುವ ಲೀಬ್, ಈ ಮನುಷ್ಯನಿಗೆ ತಾನು ಯಾವುದರ ಬಗ್ಗೆ ಮಾತನಾಡುತ್ತಿದ್ದೇನೆ ಎನ್ನುವುದೂ ಗೊತ್ತಿಲ್ಲ’ ಎಂದು ಕುಟುಕಿದ್ದರು.

ಮಸ್ಕ್ ಟ್ವಿಟರ್‌ನ್ನು ಕಳೆದ ತಿಂಗಳು ಸ್ವಾಧೀನ ಪಡಿಸಿಕೊಂಡ ಬಳಿಕ ಅದು ಗೊಂದಲಗಳ ಗೂಡಾಗಿದೆ. 44 ಶತಕೋಟಿ ಡಾ.ಗಳಿಗೆ ಕಂಪನಿಯನ್ನು ಖರೀದಿಸಿದ ಒಂದು ವಾರದೊಳಗೆ 7,000ಕ್ಕೂ ಅಧಿಕ ಉದ್ಯೋಗಿಗಳ ಪೈಕಿ ಅರ್ಧದಷ್ಟು ಜನರನ್ನು ಮಸ್ಕ್ ಕೆಲಸದಿಂದ ವಜಾ ಮಾಡಿದ್ದಾರೆ. ಹೆಚ್ಚಿನ ಹಿರಿಯ ಮ್ಯಾನೇಜರ್‌ಗಳು ಈ ಗುಂಪಿನಲ್ಲಿ ಸೇರಿದ್ದಾರೆ.

ಇದನ್ನೂ ಓದಿ: ಮಹಿಳೆಯನ್ನು ರಕ್ಷಿಸಲು ಹೋದ ಒಂದೇ ಕುಟುಂಬದ 5 ಮಂದಿ ಜಲಸಮಾಧಿ

Similar News