ನ.19ರಂದು ಶ್ರೀಬ್ರಹ್ಮಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ವೆಬ್‌ಸೈಟ್ ಅನಾವರಣ
ಉಡುಪಿ, ನ.15: ಅಧ್ಯಯನ, ಸಂಶೋಧನೆ, ಹಿರಿಯರ ಚರಿತ್ರೆಯನ್ನು ಯುವ ಪೀಳಿಗೆ ನೀಡುವ ಉದ್ದೇಶದಿಂದ ರಚಿಸಲಾಗಿರುವ ವೆಬ್‌ಸೈಟ್‌ನ ಅನಾವರಣ ಕಾರ್ಯಕ್ರಮ ನ.19ರಂದು ಸಂಜೆ 5ಗಂಟೆಗೆ ಬನ್ನಂಜೆ ಶ್ರೀನಾರಾ ಯಣ ಗುರು ಸಭಾಂಗಣದಲ್ಲಿ ನಡೆಯಲಿದೆ ಎಂದು ಶ್ರೀಬ್ರಹ್ಮಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಅಧ್ಯಕ್ಷ ದಾಮೋದರ ಕಲ್ಮಾಡಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಕ್ಷೇತ್ರ ಕಂಕನಾಡಿ ಗರೋಡಿಯ ಅಧ್ಯಕ್ಷ ಕೆ.ಚಿತ್ತರಂಜನ್ ವೆಬ್‌ಸೈಟ್ ಅನಾವರಣಗೊಳಿಸಲಿರುವರು. ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ತಬಲಾ ತರಬೇತುದಾರ ಕೆ.ಮಂಜಪ್ಪ ಸುವರ್ಣ ಅವರನ್ನು ಸನ್ಮಾನಿಸಲಾಗುವುದು. ಸಂಜೆ 5.30ಕ್ಕೆ ಸೂರ್ಯೋದಯ ಪೆರಂಪಳ್ಳಿ ನಿರ್ಮಿಸಿ, ನಿರ್ದೇಶಿಸಿದ ರಾಜ್ಯ ಪ್ರಶಸ್ತಿ ವಿಜೇತ ತುಳು ಚಲನಚಿತ್ರ ದೇಯಿಬೈದೆತಿ ಚಲನಚಿತ್ರ ಪ್ರದರ್ಶನಗೊಳ್ಳಲಿದೆ ಎಂದರು.
ತುಳುನಾಡಿನ ಅವಳಿ ವೀರರಾದ ಕೋಟಿ ಚೆನ್ನಯ್ಯ ಕಾಲದಲ್ಲಿ ಅಂಗಸಾಧನೆ, ಮಲ್ಲಸಾಧನೆಗಳ ಕೇಂದ್ರವಾಗಿದ್ದ ಪ್ರಸ್ತುತ ಕೋಟಿ ಚೆನ್ನಯ್ಯರನ್ನು ಆರಾಧಿಸುವ 250ಕ್ಕೂ ಅಧಿಕ ಗರಡಿಗಳು ಕಾಸರಗೋಡು, ಮಡಿಕೇರಿ, ಮುಂಬೈ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿವೆ. ಸುಮಾರು 500 ವರ್ಷಗಳ ಹಿಂದೆ ಕೋಟಿ ಚೆನ್ನಯ್ಯರು ಹುಟ್ಟಿ ಬೆಳೆದು ಬಾಳಿದ ಪಡುಮಲೆ, ಪಂಜ, ಎನ್ಮೂರು ಗಳಲ್ಲಿ ಅವರ ಆಡಂಬೋಲದ ಜೀವಂತ ಕುರುಹುಗಳಿವೆ. ಇವುಗಳೆಲ್ಲವೂ ಅಧ್ಯಯನ ಯೋಗ್ಯ ವಿಷಯಗಳಾಗಿವೆ ಎಂದರು.
ಕ್ರಮಬದ್ಧ ಸಂಶೋಧನೆ, ಅಧ್ಯಯನ ನಡೆಸಿ ನಮ್ಮ ಹಿರಿಯರ ಚರಿತ್ರೆ, ನಂಬಿಕೆ, ಆಚರಣೆಗಳ ಮಾಹಿತಿಗಳನ್ನು ಈ ವೆಬ್‌ಸೈಟ್ ನೀಡಲಾಗುತ್ತದೆ. ಈ ವೆಬ್‌ಸೈಟ್ ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಲಭ್ಯ ಇರುತ್ತದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೇಂದ್ರದ ಉಪಾಧ್ಯಕ್ಷ ಶೇಖರ್ ಮಾಸ್ತರ್ ಕಲ್ಮಾಡಿ, ಕಾರ್ಯದರ್ಶಿ ಎಂ.ಮಹೇಶ್ ಕುಮಾರ್, ಚಿತ್ರ ನಿರ್ದೇಶಕ ಸೂರ್ಯೋದಯ ಪೆರಂಪಳ್ಳಿ, ವಿಶ್ವಸ್ಥ ಹರೀಶ್ ಎಂ.ಕೆ., ಜಾನಪದ ಸಾಹಿತಿ ಚೆಲುವರಾಜ್ ಪೆರಂಪಳ್ಳಿ, ಕೋಶಾಕಾರಿ ಮಹೇಶ್ ಎನ್., ಜತೆ ಕಾರ್ಯದರ್ಶಿ ಶೇಖರ್ ಪೂಜಾರಿ ಉಪಸ್ಥಿತರಿದ್ದರು.