ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಕ್ಯಾಥರಿನ್ ರೊಡ್ರಿಗಸ್
ಉಡುಪಿ, ನ.15: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ್ ಕಾಪು ತಾಲ್ಲೂಕು ಘಟಕದ ವತಿಯಿಂದ ಡಿ.10ರಂದು ಕಟಪಾಡಿಯ ಎಸ್‌ವಿಎಸ್ ಪದವಿಪೂರ್ವ ಕಾಲೇಜು ಆವರಣದಲ್ಲಿ ಜರಗಲಿರುವ ಕಾಪು ತಾಲ್ಲೂಕು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಬಹುಭಾಷಾ ಹಾಗೂ ಹಿರಿಯ ಮಹಿಳಾ ಸಾಹಿತಿ ಕ್ಯಾಥರಿನ್ ರೊಡ್ರಿಗಸ್ ಕಟಪಾಡಿ ಅವರನ್ನು ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ನೇತೃತ್ವದ ಜಿಲ್ಲಾ ಕಾರ್ಯಕಾರಿ ಸಮಿತಿಯು ಆಯ್ಕೆ ಮಾಡಿದೆ.
ಕ್ಯಾಥರಿನ್ ರೊಡ್ರಿಗಸ್ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರ ರಾಗಿದ್ದು, ಕನ್ನಡ, ತುಳು, ಕೊಂಕಣಿಯಲ್ಲಿ ಸಾಮಾಜಿಕ ಕಾಳಜಿ ಹಾಗೂ ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಕಥೆ, ಕವನ, ಕಾದಂಬರಿ, ನಾಟಕ, ಲೇಖನ, ನುಡಿಚಿತ್ರಗಳ ಅಪಾರ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ. ಚಿಪ್ಪೊಳಗಿನ ಮುತ್ತು, ತುಂಬೆ, ಸ್ನೇಹ ಬಂಧನ, ಸ್ನೇಹ-ಪ್ರೀತಿ,(ಕನ್ನಡ), ಮನ್ ಲಾಸ್ತಾನಾ, ಆಜ್ ತಾಕಾ, ಫಾಲ್ಯಾಂ ತುಕಾ, ಕೊಗುಳ್ ಗಾಯಾತಿನಾ, ದೆವಾಚೆಂ ಭುರ್ಗೆಂ, ತುಳಸಿ, ಶಿಂಪಿಯೆಂತ್ಲೆಂ ಮೊತಿಂ, ತೆದೊಳೆ, ಚೆರುಪ್ಯೊ, ಏಕ್ ಫೊಡ್ ದುಕ್ರಾ ಮಾಸ್, ಬೆಣ್ಸಾಂ, ಸಾತೆಂ, ರುಂಬ್ಡಿಚೆಂ ಘರ್, ಪಾವ್ಲಚಿ ಕಿತಾಪತ್, ವ್ಹಾಳೊ(ಕೊಂಕಣಿ), ತೆಂಬರೆ, ಬೀರೆರ್, ಪಾಪೆ, ಸತ್ಯದಬಾಲೆಲು ಸಹಿತ 57 ತುಳು ನಾಟಕ ರಚನೆ, ಇತ್ಯಾದಿಗಳು ಅವರ ಪ್ರಮುಖ ಕೃತಿಗಳು. ಇವರು ಹಲವು ಪ್ರಶಸ್ತಿ ಭಾಜನರಾಗಿ ದ್ದಾರೆ ಎಂದು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.