ನ.21ರಿಂದ ಭತ್ತ ಖರೀದಿ ನೋಂದಣಿ ಕೇಂದ್ರ ಆರಂಭ: ಉಡುಪಿ ಡಿಸಿ ಕೂರ್ಮಾರಾವ್
ಉಡುಪಿ, ನ.15: ಪ್ರಸಕ್ತ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ, ಜಿಲ್ಲೆಯ ರೈತರಿಂದ ಸ್ಥಳೀಯವಾಗಿ ಬೆಳದಿರುವ ಭತ್ತವನ್ನು ಖರೀದಿಸಲು ಜಿಲ್ಲೆಯಲ್ಲಿ ನ.21ರಿಂದ ಭತ್ತ ಖರೀದಿಗೆ ನೋಂದಣಿ ಕೇಂದ್ರ ಗಳನ್ನು ತೆರೆದು, ರೈತರ ನೋಂದಣಿಯನ್ನು ಆರಂಭಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚನೆ ನೀಡಿದ್ದಾರೆ.
ಮಂಗಳವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಯಲ್ಲಿ ಸ್ಥಳೀಯವಾಗಿ ಬೆಳೆಯುವ ಭತ್ತದ ತಳಿಗಳಾದ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ, ಉಷಾ, ಅಭಿಲಾಷ ಮತ್ತು ಎಂಓ4 ತಳಿಯ ಭತ್ತಕ್ಕೆ ಬೆಂಬಲ ಬೆಲೆ ಘೋಷಿಸಿದ್ದು, ಅದರಂತೆ ಸಾಮಾನ್ಯ ಭತ್ತಕ್ಕೆ ರೂ.2540 ರೂ. ದರ ನಿಗದಿಪಡಿಸಲಾಗಿದೆ. ಜಿಲ್ಲೆಯಾದ್ಯಂತ ರೈತರಿಗೆ ಅನುಕೂಲ ಆಗುವಂತೆ 10 ಕಡೆಗಳಲ್ಲಿ ಭತ್ತ ನೊಂದಣಿ ಕೇಂದ್ರಗಳನ್ನು ಹಾಗೂ 7 ಕಡೆಗಳಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು ಬೇಡಿಕೆ ಇದ್ದಲ್ಲಿ ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ನೊಂದಣಿ ಮತ್ತು ಖರೀದಿ ಕೇಂದ್ರ ತೆರೆಯಲು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದರು.
ಭತ್ತ ಖರೀದಿ ಕೇಂದ್ರಗಳಲ್ಲಿ ಭತ್ತದ ಗುಣಮಟ್ಟವನ್ನು ಪರೀಕ್ಷಿಸಲು ಗ್ರೇಡರ್ ಗಳನ್ನು ನಿಯೋಜಿಸುವಂತೆ ಹಾಗೂ ಖರೀದಿಸಿದ ಭತ್ತವನ್ನು ಸೂಕ್ತ ರೀತಿಯಲ್ಲಿ ದಾಸ್ತಾನು ಮಾಡಲು ಅಗತ್ಯವಿರುವ ದಾಸ್ತಾನು ಕೇಂದ್ರಗಳನ್ನು ಗುರುತಿಸುವಂತೆ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ಫ್ರುಟ್ಸ್ ತಂತ್ರಾಂಶದಲ್ಲಿ ನೊಂದಣಿಯಾದ ರೈತರು ತಾವು ಬೆಳದ ಭತ್ತವನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡ ಬಹುದಾಗಿದ್ದು, ಇದುವರೆಗೆ ಈ ತಂತ್ರಾಂಶದಲ್ಲಿ ನೊಂದಣಿಯಾಗದ ರೈತರು ನೊಂದಣಿ ಮಾಡಿಕೊಂಡು ಮಾರಾಟ ಮಾಡಬಹುದಾಗಿದೆ. ಭತ್ತ ಮಾರಾಟದ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡುವುದರಿಂದ, ಮಾರಾಟ ಸಮಯದಲ್ಲಿ ರೈತರು ಆಧಾರ್ ಸಂಖ್ಯೆ ನೊಂದಣಿ ಯಾದ ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನೀಡುವಂತೆ ತಿಳಿಸಿದರು.
ಬೆಂಬಲ ಬೆಲೆಯಡಿ ಭತ್ತ ಖರೀದಿ ಕುರಿತಂತೆ, ಗ್ರಾಮೀಣ ಭಾಗದಲ್ಲಿ ರೈತರಿಗೆ ಹಾಗೂ ರೈತ ಮುಖಂಡರಿಗೆ ಹಾಗೂ ರೈತ ಸಂಪರ್ಕ ಕೇಂದ್ರಗಳ ಮೂಲಕ ಹೆಚ್ಚಿನ ಮಾಹಿತಿ ನೀಡುವಂತೆ ಹಾಗೂ ರೈತರ ನೊಂದಣಿ ಕೇಂದ್ರಗಳು ಹಾಗೂ ಭತ್ತ ಖರೀದಿ ಕೇಂದ್ರಗಳ ಕುರಿತು ವಿವರಗಳನ್ನು ನೀಡುವಂತೆ ತಿಳಿಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕೃಷಿ ಇಲಾಖೆ, ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧಿಕಾರಿಗಳು, ಎಪಿಎಂಸಿ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿ ರೈತರಿಂದ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಪ್ರಕ್ರಿಯೆಯನ್ನು ನಡೆಸುವಂತೆ ಜಿಲ್ಲಾಧಿಕಾರಿ ನಿರ್ದೇಶಿಸಿದರು.
ಭತ್ತ ಖರೀದಿ ಕೇಂದ್ರಗಳಲ್ಲಿ ರೈತರಿಂದ ಖರೀದಿಸಿದ ಭತ್ತವನ್ನು, ಜಿಲ್ಲೆಯ ಅಕ್ಕಿ ಗಿರಣಿಗಳಲ್ಲಿ ಹಲ್ಲಿಂಗ್ ಮತ್ತು ಕುಚ್ಚಲಕ್ಕಿಯಾಗಿ ಪರಿವರ್ತಿಸಲು ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡುವುದಾಗಿ ಅಕ್ಕಿ ಗಿರಣಿಗಳ ಮಾಲಕರು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ತರಬೇತಿ ನಿರತ ಐಎಎಸ್ ಅಧಿಕಾರಿ ಯತೀಶ್, ಆಹಾರ ಇಲಾಖೆ ಉಪ ನಿರ್ದೇಶಕ ಮೊಹಮ್ಮದ್ ಇಸಾಕ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧಿಕಾರಿಗಳು, ಎಪಿಎಂಸಿ ಇಲಾಖೆಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಖರೀದಿಸುವ ಪ್ರತಿ ಕ್ವಿಂಟಾಲ್ ಭತ್ತಕ್ಕೆ 500ರೂ. ಪ್ರೋತ್ಸಾಹಧನ
ರಾಜ್ಯ ಅಹಾರ ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ಮೂಲಕ ಸರಕಾರ ಸೋಮವಾರ ಹೊರಡಿಸಿದ ಆದೇಶದಂತೆ 2022-23ನೇ ಸಾಲಿಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸ್ಥಳೀಯವಾಗಿ ಬೆಳೆಯಲಾಗುವ ಭತ್ತದ ತಳಿಗಳ ಭತ್ತವನ್ನು ಸರಕಾರ ದಿಂದ ನೇಮಿಸಲ್ಪಟ್ಟ ಖರೀದಿ ಏಜೆನ್ಸಿಯ ಮೂಲಕ ಸಾಮಾನ್ಯ ಭತ್ತವನ್ನು ಪ್ರತಿ ಕ್ವಿಂಟಾಲ್‌ಗೆ 2040ರೂ. ಹಾಗೂ ಎ ಭತ್ತವನ್ನು ಪ್ರತಿ ಕ್ವಿಂಟಾಲ್‌ಗೆ 2060ರೂ.ಗೆ ಖರೀದಿಸಲಾಗುತ್ತದೆ. ಅಲ್ಲದೇ ಈ ಜಿಲ್ಲೆಗಳ ರೈತರಿಂದ ಖರೀದಿಸಲಾ ಗುವ ಸ್ಥಳೀಯ ತಳಿಗಳ ಭತ್ತಕ್ಕೆ ಪ್ರತಿ ಕ್ವಿಂಟಾಲ್‌ಗೆ 500ರೂ.ಗಳ ಪ್ರೋತ್ಸಾಹಧನವನ್ನು ನೀಡಲು (ಒಟ್ಟು 2540ರೂ.) ಆದೇಶದಲ್ಲಿ ತಿಳಿಸಲಾಗಿದೆ.
ಪ್ರತಿ ಜಿಲ್ಲೆಯಲ್ಲಿ ಅಗತ್ಯಕ್ಕೆ ತಕ್ಕಂತೆ 15ರಿಂದ 25 ಖರೀದಿ ಕೇಂದ್ರಗಳನ್ನು ತೆರೆದು ನ.21ರಿಂದ ಡಿ.21ರವರೆಗೆ ರೈತರ ನೊಂದಣಿ ಕಾರ್ಯವನ್ನು ಹಾಗೂ ಡಿ.1ರಿಂದ 2023ರ ಫೆಬ್ರವರಿ 28ರವರೆಗೆ ಭತ್ತ ಖರೀದಿ ಕಾರ್ಯವನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 16 ಕ್ವಿಂಟಾಲ್ ನಂತೆ ಗರಿಷ್ಠ 40 ಕ್ವಿಂಟಾಲ್ ಮೀರದಂತೆ ಭತ್ತವನ್ನು ಖರೀದಿಸಬಹುದು. ಇದಕ್ಕಿಂತ ಹೆಚ್ಚುವರಿ ಭತ್ತ ಖರೀದಿಸುವಂತಿಲ್ಲ.
ಭತ್ತವನ್ನು ಮಾರಾಟ ಮಾಡಿದ ರೈತರಿಗೆ 15 ದಿನದೊಳಗೆ ಅವರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಹಣ ವರ್ಗಾವಣೆ ಮಾಡಬೇಕು. ಇಲಾಖೆಯ ಜಂಟಿ ನಿರ್ದೇಶಕರನ್ನು ಈ ಋತುವಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯ ರಾಜ್ಯಮಟ್ಟದ ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾ ಗಿದೆ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.