ಕಾಂತಾರ ವಿವಾದ: ಕೇರಳ ನ್ಯಾಯಾಲಯದ ಆದೇಶದ ಬಳಿಕ ‘ವರಾಹ ರೂಪಂ’ ಯೂಟ್ಯೂಬ್‌ನಿಂದ ಮಾಯ

Update: 2022-11-15 15:09 GMT

ಹೊಸದಿಲ್ಲಿ,ನ.15: ಗಲ್ಲಾಪೆಟ್ಟಿಗೆಯನ್ನು ಸೂರೆಗೈದಿರುವ ಕನ್ನಡ ಚಿತ್ರ ‘ಕಾಂತಾರ’('Kantara')ದ ನಿರ್ಮಾಪಕರು ‘ವರಾಹ ರೂಪಂ ’(Varaha Rupam)ಹಾಡನ್ನು ಯೂಟ್ಯೂಬ್ ನಿಂದ ಅಳಿಸಿದ್ದಾರೆ. ವರಾಹ ರೂಪಂ ಅನ್ನು ತನ್ನ ಬೌದ್ಧಿಕ ಆಸ್ತಿ ‘ನವರಸಂ ’(Navarasam)ನಿಂದ ಎತ್ತಿಕೊಳ್ಳಲಾಗಿದೆ ಎಂದು ಪ್ರತಿಪಾದಿಸಿರುವ ಕೇರಳದ ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್‌(Taikkudam Bridge Band) ಚಿತ್ರದ ನಿರ್ಮಾಪಕರ ವಿರುದ್ಧ ಕೃತಿಚೌರ್ಯದ ಆರೋಪವನ್ನು ಹೊರಿಸಿದ ಬಳಿಕ ಈ ಹಾಡು ವಿವಾದಕ್ಕೆ ಸಿಲುಕಿತ್ತು.

ಕೊಝಿಕ್ಕೋಡ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಕಳೆದ ತಿಂಗಳು ಥೈಕ್ಕುಡಂ ಬ್ರಿಡ್ಜ್ ಪರವಾನಿಗೆಯಿಲ್ಲದೆ ವರಾಹ ರೂಪಂ ಹಾಡನ್ನು ನುಡಿಸುವುದಕ್ಕೆ ಚಿತ್ರದ ನಿರ್ಮಾಪಕ, ನಿರ್ದೇಶಕ ಮತ್ತು ಸಂಗೀತ ನಿರ್ದೇಶಕ ಹಾಗೂ ಅಮೆಝಾನ್, ಯೂಟ್ಯೂಬ್, ಸ್ಪೋಟಿಫೈ, ವಿಂಕ್ ಮ್ಯೂಸಿಕ್ ಸೇರಿದಂತೆ ಹಲವಾರು ಮ್ಯೂಸಿಕ್ ಪ್ಲಾಟ್ಫಾರ್ಮ ಗಳ  ವಿರುದ್ಧ ತಡೆಯಾಜ್ಞೆ ಹೊರಡಿಸಿದ ಬಳಿಕ ಯೂಟ್ಯೂಬ್ ನಿಂದ  ಹಾಡನ್ನು ತೆಗೆಯಲಾಗಿದೆ.

ಇದಾದ ಬಳಿಕ ನ.2ರಂದು ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯವು ಹಾಡಿನ ಸ್ಟ್ರೀಮಿಂಗ್ ನಿಲ್ಲಿಸುವಂತೆ ಕಾಂತಾರ ನಿರ್ಮಾಪಕರನ್ನು ಆದೇಶಿಸಿತ್ತು. ಥೈಕ್ಕುಡಂ ಬ್ರಿಡ್ಜ್ ನ  ನವರಸಂ ಹಾಡಿನ ಹಕ್ಕುಸ್ವಾಮ್ಯ ಹೊಂದಿರುವ ಮಾತೃಭೂಮಿ ಪ್ರಿಂಟಿಂಗ್ ಆ್ಯಂಡ್ ಪಬ್ಲಿಷಿಂಗ್ ಕಂಪನಿ ಲಿ.ಹೂಡಿದ್ದ ದಾವೆಗೆ ಸಂಬಂಧಿಸಿ ಈ ತಡೆಯಾಜ್ಞೆಯನ್ನು ಹೊರಡಿಸಲಾಗಿತ್ತು.

Similar News