​ಉಕ್ರೇನ್ ಬಿಕ್ಕಟ್ಟಿಗೆ ರಾಜತಾಂತ್ರಿಕ ಪರಿಹಾರ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಕರೆ

Update: 2022-11-15 16:56 GMT

 ಜಕಾರ್ತ, ನ.15: ಉಕ್ರೇನ್ ಬಿಕ್ಕಟ್ಟನ್ನು ಶೀಘ್ರ ಅಂತ್ಯಗೊಳಿಸಲು ಜಾಗತಿಕ ಸಮುದಾಯ ಗಮನಹರಿಸಬೇಕು. ಉಕ್ರೇನ್ನಲ್ಲಿ ಕದನ ವಿರಾಮ ಜಾರಿ ಹಾಗೂ ರಾಜತಾಂತ್ರಿಕ ಉಪಕ್ರಮಗಳ ಮೂಲಕ ಪರಿಹಾರ ಕಂಡುಕೊಳ್ಳುವುದು ಅತೀ ಅಗತ್ಯವಾಗಿದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi)ಹೇಳಿದ್ದಾರೆ.
ಇಂಡೋನೇಶ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಮಾತನಾಡಿದ ಮೋದಿ ‘ಕಳೆದ ಶತಮಾನದಲ್ಲಿ ಎರಡನೇ ವಿಶ್ವಯುದ್ಧವು ಪ್ರಪಂಚದಲ್ಲಿ ವಿನಾಶಕ್ಕೆ ಕಾರಣವಾಗಿತ್ತು. 

ಆ ಬಳಿಕ ಅಂದಿನ ನಾಯಕರು ಶಾಂತಿ ಮಾರ್ಗ ಹಿಡಿಯಲು ಗಂಭೀರ ಪ್ರಯತ್ನ ನಡೆಸಿದರು. ಈಗ ನಮ್ಮ ಸರದಿಯಾಗಿದೆ ಎಂದರು.
ಭಾರತದಲ್ಲಿ ಸುಸ್ಥಿರ ಆಹಾರ ಭದ್ರತೆಗಾಗಿ ನೈಸರ್ಗಿಕ ಕೃಷಿಗೆ ನೀಡುತ್ತಿರುವ ಉತ್ತೇಜನ, ರಾಗಿಯಂತಹ ಸಾಂಪ್ರದಾಯಿಕ ಮತ್ತು ಪೌಷ್ಟಿಕ ಆಹಾರಧಾನ್ಯಗಳನ್ನು ಜನಪ್ರಿಯಗೊಳಿಸಲು ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ ಮೋದಿ, ಮುಂಬರುವ ವರ್ಷದಲ್ಲಿ ಅಂತರಾಷ್ಟ್ರೀಯ ರಾಗಿ ವರ್ಷವನ್ನು ಸಂಭ್ರಮದಿಂದ ಆಚರಿಸುವಂತೆ ಕರೆ ನೀಡಿದರು.
ಹವಾಮಾನ ಬದಲಾವಣೆ, ಕೋವಿಡ್ ಸಾಂಕ್ರಾಮಿಕ ಹಾಗೂ ಉಕ್ರೇನ್ನಲ್ಲಿನ ಬೆಳವಣಿಗೆ ಜಗತ್ತಿನಲ್ಲಿ ವ್ಯಾಪಕ ಹಾನಿಗೆ ಕಾರಣವಾಗಿದೆ. ಜಾಗತಿಕ ಪೂರೈಕೆ ಸರಪಳಿ ಧ್ವಂಸಗೊಂಡಿದೆ. ವಿಶ್ವದಲ್ಲಿಯೇ ಅಗತ್ಯದ ವಸ್ತುಗಳ ಪೂರೈಕೆಗೆ ಸಮಸ್ಯೆಯಾಗಿದೆ. ಈ ಬದಲಾವಣೆಯು ಎಲ್ಲಾ ದೇಶಗಳ ಬಡಜನರಿಗೆ ಅತ್ಯಂತ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ ಎಂದರು.
ಇಂಧನ ಪೂರೈಕೆಯಲ್ಲಿ ಯಾವುದೇ ರೀತಿಯ ನಿರ್ಬಂಧಗಳನ್ನು ಪ್ರೋತ್ಸಾಹಿಸಬಾರದು ಮತ್ತು ಇಂಧನ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಬೇಕು. ಶುದ್ಧ ಇಂಧನ ಮತ್ತು ಪರಿಸರಕ್ಕೆ ಭಾರತ ಬದ್ಧವಾಗಿದೆ. 2030ರ ವೇಳೆಗೆ ನಮ್ಮ ಬೇಡಿಕೆಯ 50%ದಷ್ಟು ವಿದ್ಯುತ್ ಅನ್ನು ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸಲಾಗುತ್ತದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

Similar News