ರಷ್ಯಾದ ಕ್ಷಿಪಣಿ ಅಪ್ಪಳಿಸಿ ಪೋಲಂಡ್‍ನಲ್ಲಿ ಇಬ್ಬರು ಮೃತ್ಯು: ವರದಿ

Update: 2022-11-16 01:58 GMT

ಕೀವ್: ಉಕ್ರೇನ್ ಮೇಲೆ ಮಂಗಳವಾರ ರಷ್ಯಾ ಕ್ಷಿಪಣಿ ಮಳೆಗೆರೆದಿದ್ದು (Missile strikes hit cities across Ukraine), ಪಕ್ಕದ ಪೋಲಂಡ್‍ನಲ್ಲಿ ರಷ್ಯಾದ ಕ್ಷಿಪಣಿ ಅಪ್ಪಳಿಸಿ ಇಬ್ಬರು ಮೃತಪಟ್ಟಿದ್ದಾರೆ ಎಂದು timesofindia.com ವರದಿ ಮಾಡಿದೆ.

ವಿದ್ಯುತ್ ಘಟಕಗಳನ್ನು ಗುರಿ ಮಾಡಿದ ರಷ್ಯಾದ ಕ್ಷಿಪಣಿ ದಾಳಿಯಿಂದಾಗಿ ಸುಮಾರು 70 ಲಕ್ಷ ಮನೆಗಳು ಕಗ್ಗತ್ತಲಲ್ಲಿ ರಾತ್ರಿ ಕಳೆಯಬೇಕಾದ ಪರಿಸ್ಥಿತಿ ಉದ್ಭವಿಸಿದೆ (seven million homes into darkness). ಉಕ್ರೇನ್‍ನಲ್ಲಿ ತೀವ್ರವಾಗುತ್ತಿರುವ ಸಂಘರ್ಷವನ್ನು ನಿಭಾಯಿಸುವ ಕಾರ್ಯವಿಧಾನಗಳ ಬಗ್ಗೆ ಜಿ-20 ಮುಖಂಡ ಶೃಂಗ ಕೂಡಾ ಚರ್ಚೆ ನಡೆಸುವ ಸಾಧ್ಯತೆ ಇದೆ.

ದೇಶಾದ್ಯಂತ ವಿದ್ಯುತ್ ಉತ್ಪಾದನಾ ಘಟಕಗಳ ಮೇಲೆ ರಷ್ಯಾ 85 ಕ್ಷಿಪಣಿ ದಾಳಿ ನಡೆಸಿದೆ ಎಂದು ಉಕ್ರೇನ್ ಅಧ್ಯಕ್ಷರ ಕಚೇರಿ ಪ್ರಕಟಿಸಿದೆ. ಈ ದಾಳಿಯಿಂದಾಗಿ ನೆರೆಯ ಮೋಲ್ಡೋವಾದಲ್ಲಿ ಕೂಡಾ ವಿದ್ಯುತ್ ಸರಬರಾಜು ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.

ರಷ್ಯಾದ ಕ್ಷಿಪಣಿ ಗಡಿಯನ್ನು ದಾಟಿ ಪೋಲಂಡ್‍ನ ಮೇಲೆ ಅಪ್ಪಳಿಸಿದ್ದು, ಘಟನೆಯಲ್ಲಿ ಇಬ್ಬರು ಜೀವ ಕಳೆದುಕೊಂಡಿದ್ದಾರೆ ಎಂದು ನ್ಯಾಟೊ ಹೇಳಿಕೆಯನ್ನು ಉಲ್ಲೇಖಿಸಿ ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಉಕ್ರೇನ್ ಗಡಿಗೆ ಹೊಂದಿಕೊಂಡಿರುವ ಪ್ರೆವೋಡೋವ್ ಎಂಬ ಗ್ರಾಮಕ್ಕೆ ಕ್ಷಿಪಣಿ ಅಪ್ಪಳಿಸಿದೆ ಎಂದು ಪೋಲಂಡ್ ಮಾಧ್ಯಮಗಳು ವರದಿ ಮಾಡಿವೆ.

ಈ ಸಂಘರ್ಷದ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಅಗ್ರ ನಾಯಕರು ತುರ್ತು ಸಭೆ ನಡೆಸಿದ್ದಾರೆ ಎಂದು ಪೋಲಂಡ್ ಸರ್ಕಾರಿ ವಕ್ತಾರ ಪಿಯೋಟ್ರ್ ಮುಲ್ಲೆರ್ ಹೇಳಿದ್ದಾರೆ. ಆದರೆ ದೇಶದ ಮೇಲೆ ಕ್ಷಿಪಣಿ ದಾಳಿ ನಡೆದಿರುವುದನ್ನು ಅವರು ದೃಢಪಡಿಸಿಲ್ಲ.

ಘಟನೆ ಬಳಿಕ ಹಂಗೇರಿ ಪ್ರಧಾನಿ ವಿಕ್ಟರ್ ಓರ್ಬನ್ ತುರ್ತಾಗಿ ರಕ್ಷಣಾ ಮಂಡಳಿಯ ಸಭೆ ನಡೆಸಿ ಪರಿಸ್ಥಿತಿ ಬಗ್ಗೆ ಚರ್ಚಿಸಿದರು. ಪೂರ್ವ ಪೋಲೆಂಡ್ ಗ್ರಾಮದಲ್ಲಿ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ಡ್ರುಝುಬಾ ಪೈಪ್‍ಲೈನ್‍ನಲ್ಲಿ ಕಚ್ಚಾತೈಲ ಸರಬರಾಜು ಸ್ಥಗಿತಗೊಳಿಸಲಾಗಿದೆ ಎಂದು timesofindia.com ವರದಿ ಮಾಡಿದೆ.

Similar News