ಬಸ್ ಸಮಸ್ಯೆ ಬಗ್ಗೆ ಪುದು ಗ್ರಾಮ ಪಂಚಾಯತ್ ಮನವಿಗೆ ಸ್ಪಂದನೆ

"ಶಾಸಕ ಯು.ಟಿ.ಖಾದರ್, ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಅಭಿನಂದನೆ"

Update: 2022-11-16 05:05 GMT

ಬಂಟ್ವಾಳ, ನ.16: ತಾಲೂಕಿನ ಫರಂಗಿಪೇಟೆಯಲ್ಲಿ ಬೆಳಗ್ಗಿನ ಸಮಯದಲ್ಲಿ ಕೆಎಸ್ಸಾರ್ಟಿಸಿ ಬಸ್ ಸಮಸ್ಯೆಯನ್ನು ಬಗೆಹರಿಸುವಂತೆ ಸಲ್ಲಿಸಲಾದ ಮನವಿಗೆ ಅಧಿಕಾರಿಗಳು ಸ್ಪಂದಿಸಿದ್ದು ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ತಿಳಿಸಿದ್ದಾರೆ. 

ಬೆಳಗ್ಗಿನ ಸಮಯ ಫರಂಗಿಪೇಟೆಯಲ್ಲಿ ಕೆಎಸ್ಸಾರ್ಟಿಸಿ ಬಸ್ ಗಳು ನಿಲುಗಡೆಯಾಗದೆ ಸಂಚಾರಿಸುವುದು, ಹೆಚ್ಚಿನ ಬಸ್ ಗಳು ಜನರಿಂದ ತುಂಬಿ ಬರುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆಯಾಗುತ್ತಿತ್ತು. ಈ ಸಮಸ್ಯೆ ಬಗೆಹರಿಸುವಂತೆ ಗ್ರಾಮ ಪಂಚಾಯತ್ ನಿಂದ ಮಾಡಲಾದ ಮನವಿಗೆ ಕೆಎಸ್ಸಾರ್ಟಿಸಿ ಅಧಿಕಾರಿಗಳು ಸ್ಪಂದಿಸಿದ್ದಾರೆ. ಬೆಳಗ್ಗಿನ ಸಮಯ ಎರಡು ಬಸ್ ಗಳು ಫರಂಗಿಪೇಟೆಯಿಂದಲೇ ಸಂಚರಿಸುತ್ತಿದ್ದು ಇದರಿಂದ ಇಲ್ಲಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿದೆ ಎಂದು ಹೇಳಿದರು. 

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ ಮಾತನಾಡಿ, ಸರಿಯಾದ ಬಸ್ ವ್ಯವಸ್ಥೆ ಇಲ್ಲದ ಕಾರಣ ಬೆಳಗ್ಗೆ 10 ಗಂಟೆ ವರೆಗೂ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್ ನಿಲ್ದಾಣದಲ್ಲೇ ಬಾಕಿಯಾಗುವ ಪರಿಸ್ಥಿತಿ ಇತ್ತು.‌ ಸಮಸ್ಯೆ ಪರಿಹರಿಸುವಂತೆ ಇಲ್ಲಿನ ಗ್ರಾಮ ಪಂಚಾಯತ್ ನಿಂದ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಅಲ್ಲದೆ ಶಾಸಕ ಯು.ಟಿ.ಖಾದರ್ ಅವರನ್ನೂ ಭೇಟಿ ಮಾಡಿ ಸಮಸ್ಯೆ ಬಗ್ಗೆ ತಿಳಿಸಲಾಗಿತ್ತು. ಯು.ಟಿ.ಖಾದರ್ ಅವರು ಕೂಡಲೇ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಕರೆ ಮಾಡಿ ಸಮಸ್ಯೆ ಸರಿಪಡಿಸುವಂತೆ ಸೂಚಿಸಿದ್ದರು. ಅದರಂತೆ ಬಸ್ ಸಮಸ್ಯೆ ಬಗೆಹರಿದಿದ್ದು ಅಭಿನಂದನೀಯವಾಗಿದೆ ಎಂದು ಹೇಳಿದರು. 

ಒಂದು ವಾರದಿಂದ ಬೆಳಗ್ಗೆ 7:45ಕ್ಕೆ ಮತ್ತು 8:15ಕ್ಕೆ ಎರಡು ಬಸ್ ಗಳು ಫರಂಗಿಪೇಟೆಯಿಂದಲೇ ಸಂಚರಿಸುತ್ತಿದೆ. ಪಡೀಲ್ ನಂತೂರು ಲಾಲ್ ಬಾಗ್ ಮಾರ್ಗವಾಗಿ ಸಂಚರಿಸುವ ಮತ್ತೊಂದು ಬಸ್ 8:30ಕ್ಕೆ ಸಂಚರಿಸುತ್ತಿದೆ. ಇದರಿಂದ ಇಲ್ಲಿನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿದೆ. ಸಮಸ್ಯೆ ಬಗೆಹರಿಸಿದ ಕೆಎಸ್ಸಾರ್ಟಿಸಿ ಅಧಿಕಾರಿಗಳು ಹಾಗೂ ಶಾಸಕ ಯು.ಟಿ.ಖಾದರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ದಿನನಿತ್ಯ ಸಮಯಕ್ಕೆ ಸರಿಯಾಗಿ ಈ ಮೂರು ಬಸ್ ಗಳು ಸಂಚರಿಸುತ್ತಿದೆಯೇ ಎಂಬುದರ ಬಗ್ಗೆ ಗ್ರಾಮ ಪಂಚಾಯತ್ ನಿಗಾ ವಹಿಸಲಿದೆ ಎಂದು ಅವರು ಹೇಳಿದರು. 

ಫರಂಗಿಪೇಟೆಯಿಂದಲೇ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಿರುವುದರಿಂದ ಸಮಯಕ್ಕೆ ಸರಿಯಾಗಿ ಶಾಲಾ, ಕಾಲೇಜು, ಕೆಲಸ ಕಾರ್ಯಗಳಿಗೆ ತಲುಪಲು ಸಾಧ್ಯವಾಗುತ್ತಿರುವ ಬಗ್ಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕಕರು ಪ್ರಶಂಸನೀಯ ಮಾತುಗಳನ್ನು ಹೇಳಿದರು.

Similar News