ಅಂಕಗಳಿಗಿಂತ ಮಗುವಿನ ಕಲಾ ಅಭಿವ್ಯಕ್ತಿಗೆ ಅವಕಾಶ ಸಿಗಲಿ: ಡಾ. ಅಶೋಕ್ ಕಾಮತ್
ಉಡುಪಿ, ನ.17: ಶಾಲೆಗಳಲ್ಲಿ ವಿದ್ಯಾರ್ಥಿಯೊಬ್ಬನ ಅಂಕಗಳ ವೈಭವೀಕರಣ ಕ್ಕಿಂತ ಪ್ರತಿಯೊಬ್ಬ ಮಗುವಿನ ಸಮಗ್ರ ಅಭಿವ್ಯಕ್ತಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುವಂತಾಗ ಬೇಕು. ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ಕರಕುಶಲ, ಚಿತ್ರಕಲೆಗಳಿಗೆ ಹೆಚ್ಚಿನ ಅವಕಾಶ ಸಿಗಬೇಕಾಗಿದೆ ಎಂದು ಉಡುಪಿ ಡಯಟ್‌ನ ಉಪ ಪ್ರಾಂಶುಪಾಲ ಡಾ. ಕೆ. ಅಶೋಕ್ ಕಾಮತ್ ಅಭಿಪ್ರಾಯ ಪಟ್ಟಿದ್ದಾರೆ.
ಅವರು ನಗರದ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಚಿತ್ರಕಲಾ ಮಂದಿರ ಕಲಾವಿದ್ಯಾಲಯದ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ಬ್ರಹ್ಮಾವರದ ನಿವೃತ್ತ ಚಿತ್ರಕಲಾ ಶಿಕ್ಷಕ ಕೆ. ದಿನಮಣಿ ಶಾಸ್ತ್ರಿ ಅವರ ಆಕ್ರಲಿಕ್ ಚಿತ್ರಕಲಾ ಕೃತಿಗಳ ಪ್ರದರ್ಶನ ‘ಚಿತ್ತಾರ’ವನ್ನು ಗುರುವಾರ ಉದ್ಘಾಟಿಸಿ ಮಾತನಾಡುತಿದ್ದರು.
ವಿದ್ಯಾರ್ಥಿಗಳಲ್ಲಿ ಸಹೃದಯತೆ, ಮಾನವೀಯತೆ ಬೆಳೆಸುವ ಕಾಳಜಿಗೆ ಚಿತ್ರಕಲೆ, ಕರಕುಶಲ ಕೌಶಲ್ಯ ಪೂರಕ. ಅಮೆರಿಕದಲ್ಲಿ ಕಚೇರಿಗಳ ವಾತಾವರಣದ ಘನತೆ ಯನ್ನು ಕರಕುಶಲ, ಚಿತ್ರಕಲೆಗಳ ಆಧಾರದಲ್ಲಿ ಗುರುತಿಸಲಾ ಗುತ್ತದೆ. ಪರಂಪರೆಯಿಂದ ಚಿತ್ರಕಲೆ ಪಠ್ಯದ ಭಾಗವಾಗಿತ್ತಾದರೂ, ಇತ್ತೀಚೆಗೆ ಚಿತ್ರಕಲಾ ಶಿಕ್ಷಕರ ನೇಮಕವೇ ನಿಂತಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೂತನ ನೀತಿಯಲ್ಲಿ ಚಿತ್ರಕಲೆ ಸಮ್ಮಿಳಿತ, ಆಟಿಕೆ ಆಧರಿತ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಬಿಡುವಿನ ವೇಳೆಯ ಸದುಪಯೋಗ, ಸೃಜನಾತ್ಮಕ ಅಭಿವ್ಯಕ್ತಿಗೆ ಅವಕಾಶ ಅತಿ ಮುಖ್ಯ ಎಂದರು.
ಹಿರಿಯ ಕಲಾವಿದ ಪಿ. ಎನ್. ಆಚಾರ್ಯ ಮಾತನಾಡಿ, ನಿನ್ನೆ ಮಾಡಿದ ಕಲಾಕೃತಿಗಳಲ್ಲಿ ಇಂದು ಕಾಣುವ ತಪ್ಪು ತಿದ್ದಬಹುದಿತ್ತೆನ್ನುವ ನೆಲೆಯಲ್ಲಿ ನಾನಿನ್ನೂ ವಿದ್ಯಾರ್ಥಿಯಾಗಿದ್ದೇನೆ ಎಂದರು. ಚಿತ್ರಕಲಾ ಮಂದಿರ ಕಲಾ ವಿದ್ಯಾಲಯದ ನಿರ್ದೇಶಕ ಡಾ. ಯು. ಸಿ. ನಿರಂಜನ್ ಅಧ್ಯಕ್ಷತೆ ವಹಿಸಿದ್ದರು.
ಕಲಾವಿದ ದಿನಮಣಿ ಶಾಸ್ತ್ರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನ್ನಾಡಿದರು. ಉಜ್ವಲ್ ನಿರೂಪಿಸಿ, ನಿತೀಶ್ ವಂದಿಸಿದರು. ಒರಿಸ್ಸಾದ ಕಲಂಕರಿ, ಭೂ ದೃಶ್ಯ(ಲ್ಯಾಂಡ್‌ಸ್ಕೇಪ್), ಲೈಫ್(ಜೀವಂತ) ವೈವಿಧ್ಯವನ್ನೊಳಗೊಂಡ 15 ಚಿತ್ರಗಳ ಕಲಾಪ್ರದರ್ಶನ ನ.19ರ ತನಕ ಬೆಳಗ್ಗೆ 10:30ರಿಂದ ಸಂಜೆ 6ರವರೆಗೆ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿದೆ.