ಉಡುಪಿ | ಬ್ರಹ್ಮಗಿರಿಗೆ ಆಸ್ಕರ್ ಹೆಸರು ಸೇರಿದಂತೆ ಪ್ರಮುಖ ವೃತ್ತಗಳಿಗೆ ನಾಮಕರಣ ಮಾಡಿ ಸರಕಾರ ಆದೇಶ
ಉಡುಪಿ, ನ.18: ಕರ್ನಾಟಕ ಪುರಸಭೆಗಳ ಅಧಿನಿಯಮ 1964 211ರ ಅನ್ವಯ ಉಡುಪಿ ನಗರಸಭಾ ವ್ಯಾಪ್ತಿಯ ಬ್ರಹ್ಮಗಿರಿ ಸರ್ಕಲ್ ಗೆ ಆಸ್ಕರ್ ಫೆರ್ನಾಂಡಿಸ್ ಸೇರಿದಂತೆ ಪ್ರಮುಖ ವೃತ್ತಗಳಿಗೆ ನಾಮಕರಣ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಉಡುಪಿ ನಗರಸಭಾ ವ್ಯಾಪ್ತಿಯ ಬನ್ನಂಜೆ ಸರ್ಕಲ್ ಗೆ ನಾರಾಯಣಗುರು ವೃತ್ತ, ಕಲ್ಸಂಕ ವೃತ್ತಕ್ಕೆ ಮಧ್ವಾಚಾರ್ಯ ವೃತ್ತ, ಡಯಾನಾ ಸರ್ಕಲ್ ಗೆ ವಾದಿರಾಜ ವೃತ್ತ, ಸಂತೆಕಟ್ಟೆ ಕಲ್ಯಾಣಪುರ ರಸ್ತೆ ಜಂಕ್ಷನ್ ಗೆ ಕೋಟಿ -ಚೆನ್ನಯ ವೃತ್ತ, ಬ್ರಹ್ಮಗಿರಿ ದೊಡ್ಡ ಸರ್ಕಲ್ ಗೆ ಆಸ್ಕರ್ ಫೆರ್ನಾಂಡಿಸ್ ಸರ್ಕಲ್ ಹಾಗೂ ಪರ್ಕಳದಿಂದ ಕೋಡಂಗೆ ಹಾಗೂ ಕೋಡಂಗೆಯಿಂದ ಸರಳಬೆಟ್ಟುಗೆ ಹಾದುಹೋಗುವ ಮಧ್ಯದಲ್ಲಿರುವ ವೃತ್ತಕ್ಕೆ ಶ್ರೀರಾಮ ವೃತ್ತ ಎಂದು ನಾಮಕರಣ ಮಾಡಲು ಸರಕಾರ ಆದೇಶಿಸಿದೆ.
ಉಡುಪಿ ನಗರಸಭಾ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಬರುವ ವೃತ್ತ ಹಾಗೂ ಜಂಕ್ಷನ್ ಗಳಿಗೆ ಮಹಾಪುರುಷರ ಹಾಗೂ ಗಣ್ಯವ್ಯಕ್ತಿಗಳ ಹೆಸರುಗಳನ್ನು ಪದ ನಾಮಕರಣ ಮಾಡುವಂತೆ ಸಾರ್ವಜನಿಕರು, ಸಂಘ ಸಂಸ್ಥೆಗಳು ಸಲ್ಲಿಸಿರುವ ಮನವಿಯಂತೆ ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಪದನಾಮಕರಣ ಮಾಡುವ ಬಗ್ಗೆ ಚರ್ಚಿಸಿ ನಿರ್ಣಯಿಸಿ ತೀರ್ಮಾನ ಕೈಗೊಳ್ಳಲಾಗಿತ್ತು. ಬಳಿಕ ಈ ಕುರಿತಾಗಿ ಸಾರ್ವಜನಿಕರ ಆಕ್ಷೇಪ ಹಾಗೂ ಶಾಂತಿ ಸುವ್ಯವಸ್ಥೆ ಬಗ್ಗೆ ಪೊಲೀಸ್ ಅಧೀಕ್ಷಕರ ವರದಿ ಕೇಳಲಾಗಿತ್ತು. ಈ ಎಲ್ಲಾ ವೃತ್ತ/ಜಂಕ್ಷನ್ ಗಳಿಗೆ ನಗರ ಸಭೆ ನಿರ್ಣಯಿಸಿ ತೀರ್ಮಾನಿಸಿದ ಹೆಸರುಗಳಿಗೆ ಯಾವುದೇ ಆಕ್ಷೇಪ ಇಲ್ಲದೆ ಇರುವ ಬಗ್ಗೆ ಜಿಲ್ಲಾಧಿಕಾರಿಯವರು ಸರಕಾರಕ್ಕೆ ಸಲ್ಲಿಸಿರುವ ವರದಿಯಂತೆ ಈ ಆದೇಶ ಹೊರಡಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.