ಟ್ವಿಟರ್ ಉದ್ಯೋಗಿಗಳ ಸಾಮೂಹಿಕ ರಾಜೀನಾಮೆ: ಎಲಾನ್ ಮಸ್ಕ್ ಪ್ರತಿಕ್ರಿಯಿಸಿದ್ದು ಹೀಗೆ...

Update: 2022-11-18 10:44 GMT

ಹೊಸದಿಲ್ಲಿ: ‘ಕಠಿಣ’ ಪರಿಶ್ರಮಕ್ಕೆ ಬದ್ಧರಾಗಿರುವಂತೆ ತನ್ನ ಅಂತಿಮ ಎಚ್ಚರಿಕೆಯ ಬಳಿಕ ಟ್ವಿಟರ್ (Twitter) ಉದ್ಯೋಗಿಗಳ ನಿರ್ಗಮನ ಹೆಚ್ಚುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಂಪನಿಯ ನೂತನ ಮಾಲಿಕ ಎಲಾನ್ ಮಸ್ಕ್ (Elon Musk), "ಅತ್ಯುತ್ತಮ ಜನರು ಉಳಿದುಕೊಳ್ಳುತ್ತಾರೆ, ಹೀಗಾಗಿ ನಾನು ಎಳ್ಳಷ್ಟೂ ತಲೆ ಕೆಡಿಸಿಕೊಂಡಿಲ್ಲ" ಎಂದು ಸಾಮೂಹಿಕ ರಾಜೀನಾಮೆಗಳಿಂದಾಗಿ ಟ್ವಿಟರ್ ತನ್ನ ಕಚೇರಿಗಳನ್ನು ಮುಚ್ಚಿದ ಬಳಿಕ ಮಸ್ಕ್ ಟ್ವೀಟ್ ಮಾಡಿದ್ದಾರೆ.

‘ಟ್ವಿಟರ್ ಸ್ಥಗಿತಗೊಳ್ಳಲಿದೆ ಎಂದು ಜನರು ಹೇಳುತ್ತಿದ್ದರೆ ಅದರ ಅರ್ಥವೇನು? ಟ್ವಿಟರ್ ಸ್ವತಃ ಕಾರ್ಯ ನಿರ್ವಹಿಸುವುದಿಲ್ಲವೇ’ ಎಂಬ ಬಳಕೆದಾರನೋರ್ವನ ಪ್ರಶ್ನೆಗೆ ಮಸ್ಕ್ ಪ್ರತಿಕ್ರಿಯಿಸುತ್ತಿದ್ದರು.

ಕಂಪನಿಯ ‘ಕಠಿಣ ಪರಿಶ್ರಮ’ ನೀತಿಗೆ ಬದ್ಧರಾಗುವಂತೆ ಇಲ್ಲವೇ ನಿರ್ಗಮಿಸುವಂತೆ ಮಸ್ಕ್ ಅಂತಿಮ ಎಚ್ಚರಿಕೆ ನೀಡಿದ ಬಳಿಕ ನೂರಾರು ಟ್ವಿಟರ್ ಉದ್ಯೋಗಿಗಳು ರಾಜೀನಾಮೆ ಸಲ್ಲಿಸಿದ್ದಾರೆ. ಕಂಪನಿಯಿಂದ ನಿರ್ಗಮಿಸಲು ಮುಂದಾಗಿರುವ ಉದ್ಯೋಗಿಗಳ ಸಂಖ್ಯೆ ಎಷ್ಟಿದೆಯೆಂದರೆ ತನ್ನ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚುವುದನ್ನು ಟ್ವಿಟರ್ ಗೆ ಅನಿವಾರ್ಯವಾಗಿಸಿದೆ. ಸಾಮೂಹಿಕ ನಿರ್ಗಮನದ ಬಳಿಕ ಇನ್ನೊಂದು ಟ್ವೀಟ್ ನಲ್ಲಿ ಮಸ್ಕ್, "ಟ್ವಿಟರ್ ಈಗಷ್ಟೇ ಬಳಕೆಯ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ" ಎಂದು ಹೇಳಿಕೊಂಡಿದ್ದಾರೆ.

ವಿಶ್ವದ ಅತ್ಯಂತ ಶ್ರೀಮಂತನಾಗಿರುವ ಮಸ್ಕ್ ಕಳೆದ ತಿಂಗಳು 44 ಶತಕೋಟಿ ಡಾ.ಗಳಿಗೆ ಟ್ವಿಟರ್ ಖರೀದಿಸಿದ ಬಳಿಕ ಮಾಡಿರುವ ಆಮೂಲಾಗ್ರ ಬದಲಾವಣೆಗಳಿಗಾಗಿ ವ್ಯಾಪಕ ಟೀಕೆಗಳಿಗೆ ಗುರಿಯಾಗಿದ್ದಾರೆ.

ಈಗಾಗಲೇ ಕಂಪನಿಯ 7,500 ಉದ್ಯೋಗಿಗಳ ಪೈಕಿ ಅರ್ಧದಷ್ಟು ಜನರನ್ನು ಕೆಲಸದಿಂದ ವಜಾಗೊಳಿಸಿರುವ ಮಸ್ಕ್, ‘ವರ್ಕ್ ಫ್ರಮ್ ಹೋಮ್’ ನೀತಿಯನ್ನು ರದ್ದುಗೊಳಿಸಿದ್ದಾರೆ. ಕೆಲಸದ ಅವಧಿಯನ್ನು ಹೆಚ್ಚಿಸಿದ್ದಾರೆ. ಟ್ವಿಟರ್ ನ ಕೂಲಂಕಶ ನವೀಕರಣಕ್ಕಾಗಿ ಅವರ ಪ್ರಯತ್ನಗಳಿಂದಾಗಿ ಕಂಪನಿಯು ಅವ್ಯವಸ್ಥೆ ಮತ್ತು ವಿಳಂಬಗಳನ್ನು ಎದುರಿಸುತ್ತಿದೆ. ಪ್ರಮುಖ ಜಾಹೀರಾತುದಾರರೂ ಕಂಪನಿಯಿಂದ ದೂರ ಸರಿದಿದ್ದಾರೆ.

ಇದನ್ನೂ ಓದಿ: ಭಾರತ್‌ ಜೋಡೊ ಯಾತ್ರೆಗೆ ಬಾಂಬ್‌ ದಾಳಿ ಬೆದರಿಕೆ: ತನಿಖೆ ಪ್ರಾರಂಭ

Similar News