ರಾಜ್ಯದಲ್ಲಿ 'ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್' ಸ್ಥಾಪನೆ: ಸಚಿವ ಎಸ್.ಟಿ.ಸೋಮಶೇಖರ್

ಮಂಗಳೂರು | 69ನೇ ಅಖಿಲ ಭಾರತ ಮಟ್ಟದ ಸಹಕಾರ ಸಪ್ತಾಹದ ರಾಜ್ಯ ಮಟ್ಟದ ಸಹಕಾರ ಸಮಾವೇಶ

Update: 2022-11-18 11:18 GMT

ಮಂಗಳೂರು, ನ.18: ರಾಜ್ಯದಲ್ಲಿರೈತರಿಗೆ ನೆರವಾಗುವ ಉದ್ದೇಶದಿಂದ ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ರಾಜ್ಯ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

69ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿಂದು ಆಯೋಜಿಸಿದ್ದ ರಾಜ್ಯ ಮಟ್ಟದ ಸಹಕಾರ ಸಪ್ತಾಹದ ಸಹಕಾರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ರಾಜ್ಯದಲ್ಲಿ 25 ಲಕ್ಷಕ್ಕೂ ಅಧಿಕ ಹೈನುಗಾರರು ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯರಾಗಿದ್ದಾರೆ. ಈ ಪೈಕಿ 9 ಲಕ್ಷ ಮಹಿಳಾ ಸದಸ್ಯೆಯರಿದ್ದಾರೆ. ಇವರಿಗೆ ಸಾಲ ಸೌಲಭ್ಯ ನೀಡುವ ನಿಟ್ಟಿನಲ್ಲಿ ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್ ಮುಂದೆ ಕಾರ್ಯ ನಿರ್ವಹಿಸಲಿದೆ. ಈ ಬಗ್ಗೆ ನ.25ರಂದು ರಿಸರ್ವ್ ಬ್ಯಾಂಕ್ ಅಧಿಕಾರಿಗಳ ಜೊತೆ ಮಾತುಕತೆ ನಡೆಯಲಿದೆ ಎಂದು ಸಹಕಾರ ಸಚಿವರು ವಿವರಿಸಿದರು.

ರಾಜ್ಯದಲ್ಲಿ ಸ್ಥಗಿತಗೊಂಡಿರುವ ಯಶಸ್ವಿನಿ ಯೋಜನೆಯನ್ನು ಮರು ಜಾರಿ ಮಾಡಲು ಸರಕಾರ ತೀರ್ಮಾನ ಮಾಡಿದೆ ಎಂದು ಸೋಮಶೇಖರ್ ತಿಳಿಸಿದ್ದಾರೆ.

ರಾಜ್ಯಮಟ್ಟದಲ್ಲಿ ಏಳು ದಿನದ ಕಾರ್ಯಕ್ರಮಗಳು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಯಲಿದ್ದು, ನ.14ರಂದು ಸಹಕಾರ ಸಪ್ತಾಹಕ್ಕೆ ಕಲಬುರಗಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಇದರ ಸಮಾರೋಪ ಕಾರ್ಯ ಕ್ರಮವು ಮೈಸೂರಿನಲ್ಲಿ ನಡೆಯಲಿದೆ ಎಂದರು.

ಸಹಕಾರಿ ಕ್ಷೇತ್ರದಲ್ಲಿ ಕರ್ನಾಟಕವು ರಾಜ್ಯದಲ್ಲಿ ಎರಡನೆ ಸ್ಥಾನದಲ್ಲಿದೆ. ದ.ಕ. ಜಿಲ್ಲಾ ಕೆಂದ್ರ ಸಹಕಾರ ಬ್ಯಾಂಕ್ ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ರಾಜ್ಯದಲ್ಲೇ ಅಗ್ರಸ್ಥಾನದಲ್ಲಿದೆ ಎಂದು ಸೋಮಶೇಖರ್ ತಿಳಿಸಿದ್ದಾರೆ.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಮತ್ತು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ಸಹಕಾರ ರಂಗ ಎಲ್ಲರ ಸಹಕಾರದಿಂದ, ಮೊಳಹಳ್ಳಿ ಶಿವರಾಯರ ಪ್ರೇರಣೆಯಿಂದ ಬೆಳೆದಿದೆ. ಯಶಸ್ವಿನಿ ಯೋಜನೆ ಮರು ಆರಂಭಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ನುಡಿದರು.

ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಮತ್ತು ಉಡುಪಿ ಜಿಲ್ಲಾ ಯೂನಿಯನ್ ಗಳ ಸಹಯೋಗದಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮ ನಡೆಯುತ್ತಿದೆ. ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಸ್ವಾವಲಂಬಿಗಳಾಗಲು ನವೋದಯ ಸ್ವ ಸಹಾಯ ಸಂಘ ಬೆಳೆದಿದೆ. ಸಾಲ ಮರುಪಾವತಿಯಲ್ಲೂ ಮಹಿಳೆಯರು ಮುಂದೆ ಬಂದು ಸಮಗ್ರ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದು ರಾಜೇಂದ್ರ ಕುಮಾರ್ ಹೇಳಿದರು.

* ಸಹಕಾರ ರತ್ನ ಪ್ರಶಸ್ತಿ ಪ್ರದಾನ:

ಸಮಾರಂಭದಲ್ಲಿ ರಾಜ್ಯಮಟ್ಟದ ಸಹಕಾರ ರತ್ನ ಪ್ರಶಸ್ತಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಗೊಂಡಿರುವ ಕೊಂಕೋಡಿ ಪದ್ಮನಾಭ, ನಿತ್ಯಾನಂದ ಮುಂಡೋಡಿ, ದಂಬೆ ಕಾನ ಸದಾಶಿವ ರೈ, ಜಯಕರ ಶೆಟ್ಟಿ ಇಂದ್ರಾಳಿ ಮತ್ತು ಯಶ್ಪಾಲ್‌ ಸುವರ್ಣರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

* ಸಹಕಾರಿಗಳ ಪರವಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ರನ್ನು ಸನ್ಮಾನಿಸಲಾಯಿತು.

*ಇದೇ ಸಂದರ್ಭದಲ್ಲಿ ದ.ಕ. ಹಾಲು ಉತ್ಪಾದಕರ ಒಕ್ಕೂಟದಿಂದ ಕರಾವಳಿ ಸ್ಪೈಸಿ ಮಜ್ಜಿಗೆ ಮತ್ತು ಉಪ್ಪುರಹಿತ ಬೆಣ್ಣೆ ಉತ್ಪನ್ನಗಳನ್ನು ಗ್ರಾಹಕರಿಗೆ ಬಿಡುಗಡೆ ಮಾಡಲಾಯಿತು.

ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಶಾಸಕರಾದ ಯು.ಟಿ.ಖಾದರ್, ಶಾಸಕ ವೇದವ್ಯಾಸ್‌ ಕಾಮತ್‌, ಡಾ.ಭರತ್ ಶೆಟ್ಟಿ, ಮನಪಾ ಮೇಯರ್ ಜಯಾನಂದ ಅಂಚನ್, ಸಹಕಾರ ಸಂಘಗಳ ರಾಜ್ಯ ನಿಬಂಧಕ ಕ್ಯಾ.ಡಾ.ಕೆ.ರಾಜೇಂದ್ರ, ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಭಾಗವಹಿಸಿದ್ದರು.

ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ದ.ಕ. ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ‌ಸುಚರಿತ ಶೆಟ್ಟಿ, ಎಸ್.ಸಿ.ಡಿಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ ಬೆಳಪು, ಭಾಸ್ಕರ್ ಕೋಟ್ಯಾನ್, ಎಸ್ ಬಿ.ಜಯರಾಮ ರೈ, ಶಶಿ ಕುಮಾರ್ ರೈ ಬಾಲ್ಯೋಟ್ಟು, ವಾದಿರಾಜ ಶೆಟ್ಟಿ, ರಾಜು ಪೂಜಾರಿ, ಜೈರಾಜ್ ಬಿ.ರೈ, ಅಶೋಕ್ ಕುಮಾರ್ ಶೆಟ್ಟಿ, ರಾಜೇಶ್ ರಾವ್, ಮೋನಪ್ಪ ಶೆಟ್ಟಿ ಎಕ್ಕಾರು, ಸಹಕಾರಿ ಸಂಘಗಳ ಜಂಟಿ ನಿರ್ದೇಶಕ ಪ್ರವೀಣ್ ಬಿ. ನಾಯಕ್, ಉಡುಪಿ ಜಿಲ್ಲೆಗಳ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಮೀನುಗಾರರ ಸಹಕಾರ ಮಹಾ ಮಂಡಳಿಯ ಅಧ್ಯಕ್ಷ ಯಶ್ಪಾಲ್ ಸುವರ್ಣ, ಅದಾನಿ ಸಮೂಹ ಸಂಸ್ಥೆಗಳ ದಕ್ಷಿಣ ಭಾರತ ವಿಭಾಗದ ಮುಖ್ಯಸ್ಥ ಕಿಶೋರ್ ಆಳ್ವ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಪ್ರಭಾರ) ಗೋಪಿನಾಥ್ ಭಟ್, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಶೆಟ್ಟಿ  ಮೊದಲಾದವರು ಉಪಸ್ಥಿತರಿದ್ದರು.

ನಿರ್ದೇಶಕರಾದ ಟಿ.ಜಿ.ರಾಮ ಭಟ್ ಸ್ವಾಗತಿಸಿದರು. ದ.ಕ. ಸಹಕಾರಿ ಯೂನಿಯನ್ ಗಳ ಅಧ್ಯಕ್ಷ ಪ್ರಸಾದ್ ಕೌಶಲ್ಯ ಶೆಟ್ಟಿ ವಂದಿಸಿದರು.


*ಸಹಕಾರ ಸಂಘ, ಸಂಸ್ಥೆಗಳ ಪ್ರತಿನಿಧಿಗಳ ಸಹಕಾರ ಜಾಥಾ:

ಸಭಾ ಕಾರ್ಯಕ್ರಮಕ್ಕೂ ಮುನ್ನ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆವರಣದಿಂದ ಸಮಾರಂಭ ನಡೆಯುವ ಕರಾವಳಿ ಉತ್ಸವ ಮೈದಾನದವರೆಗೆ ಸಹಕಾರ ಸಂಘ, ಸಂಸ್ಥೆಗಳ ಪ್ರತಿನಿಧಿಗಳ ಸಹಕಾರ ಜಾಥಾ' ನಡೆಯಿತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಸಂಘಟನೆ ಯ ಮೂಲಪುರುಷ ಮೊಳಹಳ್ಳಿ ಶಿವರಾವ್‌ ಅವರನ್ನು ಸ್ಮರಿಸುವ ಹಾಗೂ ಸಹಕಾರ ಚಿಲುಮೆಯನ್ನು ಪ್ರತಿಬಿಂಬಸುವ ಆಕರ್ಷಕ ಟ್ಯಾಬ್ಲೊಗಳು, ಚೆಂಡೆ, ಕೊಂಬು, ಸ್ಯಾಕ್ರೋಫೋನ್ ಹೊನ್ನಾವರ, ಬ್ಯಾಂಡ್, ಸೇರಿದಂತೆ ವಿವಿಧ ಕಲಾತಂಡಗಳು ಜಾಥಾಕ್ಕೆ ಮೆರುಗು ನೀಡಿದವು.

Similar News