ಬೇಡಿಕೆ ಈಡೇರಿಸದಿದ್ದರೆ ಮೀನುಗಾರಿಕೆ ಸ್ಥಗಿತಗೊಳಿಸಿ ಮುಷ್ಕರ: ಕರ್ನಾಟಕ ಮೀನುಗಾರರ ಕ್ರಿಯಾ ಸಮಿತಿ ಎಚ್ಚರಿಕೆ

Update: 2022-11-18 11:44 GMT

ಮಲ್ಪೆ: ಕಳೆದ ಅನೇಕ ವರ್ಷಗಳಿಂದ ಮತ್ಸ್ಯಕ್ಷಾಮ, ಚಂಡಮಾರುತ, ಡಿಸೇಲ್ ಹಾಗೂ ಮೀನುಗಾರಿಕಾ ಸಲಕರಣೆಗಳ ದರ ಏರಿಕೆಯಿಂದ ಸಮುದ್ರ ಮೀನುಗಾರಿಕೆಯು ಸಂಪೂರ್ಣ ಅಧಪತನವಾಗಿದ್ದು, ರಾಜ್ಯ ಸರಕಾರ ಮುಂದಿನ ಮುಂಗಡ ಪತ್ರದಲ್ಲಿ ಕನಿಷ್ಟ 10 ಸಾವಿರ ಕೋಟಿ ರೂ. ಕಾಯ್ದಿರಿಸುವುದು ಮತ್ತು ಮೀನುಗಾರರ ನ್ಯಾಯಯುತ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ರಾಜ್ಯಾದ್ಯಂತ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾ ವಧಿ ಮುಷ್ಕರ ಹೂಡಲಾಗು ವುದು ಎಂದು ಕರ್ನಾಟಕ ಮೀನುಗಾರರ ಕ್ರಿಯಾ ಸಮಿತಿ ಎಚ್ಚರಿಕೆ ನೀಡಿದೆ.

ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿಯ ಆಡಳಿತ ಮಂಡಳಿ ಸಮಿತಿ(ಕರಾವಳಿಯ ೬೩ ಮೀನುಗಾರ ಸಂಘಟನೆಗಳ ಒಕ್ಕೂಟ) ಅಧ್ಯಕ್ಷ ಜಯ ಸಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಗುರುವಾರ ಉಚ್ಚಿಲದಲ್ಲಿ ನಡೆದ ಆಡಳಿತ ಮಂಡಳಿಯ ಸದಸ್ಯರ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.

ತೆರಿಗೆ ರಿಯಾಯಿತಿ ಡಿಸೇಲನ್ನು ದಿನವಾಹಿ 500 ಲೀಟರ್‌ಗೆ ಏರಿಕೆ, ವಾರ್ಷಿಕ ಕೋಟ ಹೆಚ್ಚುವರಿ ಕೊಡಬೇಕು. ನಾಡದೋಣಿ ಮೀನುಗಾರರಿಗೆ ಮಾಸಿಕ 500ಲೀ. ನಂತೆ ಸೀಮೆಎಣ್ಣೆ ನಿರಂತರ ಸರಬರಾಜು ಮಾಡಬೇಕು. ಎಲ್ಲಾ ಬಂದರಿನಲ್ಲಿ ನಾಡದೋಣಿ ಮೀನುಗಾರರಿಗೆ ಪ್ರತ್ಯೇಕ ದಕ್ಕೆ ನಿರ್ಮಿಸಬೇಕು.  ರಾಜ್ಯದ ಎಲ್ಲಾ ಬಂದರುಗಳ ಹೂಳೆತ್ತುವಿಕೆ, ಡ್ರೆಜ್ಜರ್ ಖರೀದಿ ಮಾಡಬೇಕು.  ಮಂಗಳೂರು ಬಂದರಿನ ವಿಸ್ತರಣಾ ಕಾಮಗಾರಿಯನ್ನು ಶೀಘ್ರ ಪೂರ್ಣ ಗೊಳಿಸಬೇಕು. ಬಂದರಿನ ಮೂಲಭೂತ ಸೌಕರ್ಯಗಳಾದ ನೀರು, ಹೈಜೆನಿಕ್ ಟಾಯ್ಲೆಟ್, ಸಮರ್ಪಕ ಒಳಚರಂಡಿ, ಶುಚಿತ್ವ, ಸೆಕ್ಯುರಿಟಿ, ಪಾರ್ಕಿಂಗ್ ಮತ್ತು ಸೂಕ್ತ ರಸ್ತೆಗಳನ್ನು ನಿರ್ಮಾಣ ಮಾಡಬೇಕು. ಬಾಕಿ ಇರುವ ಸಂಕಷ್ಟ ಪರಿಹಾರ ನಿಧಿಯ ಶೀಘ್ರ ಬಿಡುಗಡೆ ಮಾಡಬೇಕು. ಹಳೆ ಬೋಟಿನ ನೋಂದಣಿಯನ್ನು ರದ್ದು ಮಾಡಿದವರಿಗೆ ಹೊಸ ಸಾಧ್ಯತ ಪತ್ರ ನೀಡುವುದು. ಪ್ರತೀ ವರ್ಷ ಜುಲೈ 15 ರೊಳಗೆ ಬೋಟಿನ ವಾರ್ಷಿಕ ಲೈಸೆನ್ಸ್ ರಿನೀವಲ್ ಪ್ರಕ್ರಿಯೆಯನ್ನು ನಡೆಸುವುದು. ಕೇಂದ್ರ ಸರಕಾರದ ಮೀನುಗಾರಿಕೆಯ ಅಭಿವೃದ್ಧಿ ಯೋಜನೆಯ ಅಂಗವಾಗಿ ಡಿಸೇಲ್ ಮೇಲಿನ ಅಬಕಾರಿ ಸುಂಕ ರಿಯಾಯಿತಿ ಬಿಪಿಎಲ್‌ಗೆ ಕಾದಿರಿಸಿದ್ದು, ಬಿಪಿಎಲ್ ನವರಿಗೆ ಬೋಟ್ ಮಾಡಲು ಅಸಾಧ್ಯವಾದ ಕಾರಣ ಈ ನಿಬಂಧನೆ ರದ್ದುಗೊಳಿಸಿ ಸಾಮಾನ್ಯ ವರ್ಗಕ್ಕೆ ಮಾಡಬೇಕು ಎಂಬ ಬೇಡಿಕೆಗಳನ್ನು ಈಡೇರಿಸ ಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

3 ಜಿಲ್ಲೆಗಳಲ್ಲಿ ಹೋರಾಟ

ಮೀನುಗಾರಿಕೆ ಸಚಿವ ಎಸ್.ಅಂಗಾರ ಕರಾವಳಿಯ ಎಲ್ಲ ಶಾಸಕರು, ಸಂಸದರು ಹಾಗೂ ಇಲಾಖಾ ಅಧಿಕಾರಿಗಳ ಸಭೆ ಕರೆದು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಸಮಾಲೋಚನೆ ನಡೆಸಬೇಕು. ಕಳೆದ ಕೆಲವು ವರ್ಷಗಳಿಂದ ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಅತೀ ಶೀಘ್ರದಲ್ಲಿ ಪರಿಹಾರ ವನ್ನು ಒದಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನದಲ್ಲಿ ರಾಜ್ಯದ ಕರಾವಳಿ ಯುದ್ದಕ್ಕೂ ಉಗ್ರ ಹೋರಾಟ ನಡೆಸಲಾಗುವುದು.
-ಜಯ ಸಿ.ಕೋಟ್ಯಾನ್,
ಅಧ್ಯಕ್ಷರು, ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ

Similar News