ಇನ್ನಂಜೆ: ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡದ ಕಲರವ

Update: 2022-11-18 14:44 GMT

ಕಾಪು: ನಾಡು, ನುಡಿ, ಜನಪದ ಪರಂಪರಗತಾ  ಮೌಲ್ಯಗಳೊಂದಿಗೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮಾತೃ ಭಾಷೆ ಪ್ರಧಾನವಾಗಿದೆ. ಜೀವನಕ್ಕೆ ಪೂರಕವಾಗಿ ಯಾವುದೇ ಭಾಷೆಯನ್ನೂ ಕಲಿಯಬಹುದು. ಆದರೆ ಮಾತೃ ಭಾಷೆ ಯಲ್ಲಿಯೇ ಕಲಿತ ಶಿಕ್ಷಣ ನಮ್ಮ ಜೀವನ ಪರ್ಯಂತ ಶಾಶ್ವತವಾಗಿ ಸ್ಮತಿ ಪಟಲದಲ್ಲಿ ಉಳಿಯುತ್ತದೆ ಎಂದು ಕಸಾಪ ಉಡುಪಿ ಜಿಲ್ಲಾ ಕನ್ನಡ ಭವನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್ ಹೇಳಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಗೀತಾನಂದ ಫೌಂಡೇಶನ್ ಮಣೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇದರ ಸಹಭಾಗಿತ್ವ ದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಂಪದ -2022 ತಿಂಗಳ ಸಡಗರ ಸರಣಿ ಕಾರ್ಯಕ್ರಮದನ್ವಯ ಕಾಪು ತಾಲೂಕು ಕಸಾಪ ಘಟಕದ ವತಿಯಿಂದ ಇನ್ನಂಜೆ ಎಸ್‌ವಿಎಚ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರಗಿದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡದ ಕಲರವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ಎಸ್‌ವಿಎಚ್ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅನಂತ ಮೂಡಿತ್ತಾಯ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರತಿಭಾ ಕಾರಂಜಿ ಯಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಅರ್ಹತೆ ಗಳಿಸಿದ ವಿದ್ಯಾರ್ಥಿಗಳಾದ ಶ್ರೀಪಾದ, ಯಾಶಿಕ, ಸಾರ್ಥಕ್, ಅದ್ವಿತ್‌ ರನ್ನು  ಬಹುಮಾನ ನೀಡಿ ಅಭಿನಂದಿಸಲಾಯಿತು. ವಿದ್ಯಾರ್ಥಿಗಳಾದ ಶಮಿತಾ ಕುಂದರ್, ಹರ್ಷಿತ್ ಮಾತನಾಡಿದರು.

ಕಸಾಪ ತಾಲೂಕು ಸಮಿತಿಯ ಸಂಘಟನಾ ಕಾರ್ಯದರ್ಶಿ ಕೆ.ಆರ್.ಪಾಟ್ಕರ್, ಸದಸ್ಯರಾದ ಮಧುಕರ್, ಎಸ್.ಯು. ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯ ಶಿಕ್ಷಕ ನಟರಾಜ್, ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಮಮತಾ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಷ್ಮಾ ಉಪಸ್ಥಿತರಿದ್ದರು. ಶಿಕ್ಷಕಿ ಸೌಮ್ಯಾ ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ಜಾನಪದ ಗಾಯಕ ಗಣೇಶ್ ಗಂಗೊಳ್ಳಿ ಅವರಿಂದ ವಿವಿಧ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. 

Similar News