ಶಿಕ್ಷಣ ನೀತಿಯಲ್ಲಿ ಸಾಕಷ್ಟು ಗೊಂದಲಗಳಿದ್ದು ಅವುಗಳನ್ನು ಬಗೆಹರಿಸುವ ಕ್ರಮ ಆಗಬೇಕಾಗಿದೆ: ಪ್ರೊ. ಡಾ. ನಿರಂಜನಾರಾಧ್ಯಾ

Update: 2022-11-18 15:15 GMT

ಕಾರವಾರ: ಶಿಕ್ಷಣ ನೀತಿಯಲ್ಲಿ ಸಾಕಷ್ಟು ಗೊಂದಲಗಳಿದ್ದು ಅವುಗಳನ್ನು ಬಗೆಹರಿಸುವ ಕ್ರಮ ಆಗಬೇಕಾಗಿದೆ ಎಂದು ರಾಜ್ಯ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ಮಹಾಪೋಷಕ, ಶಿಕ್ಷಣ ತಜ್ಞರಾದ ಪ್ರೊ. ಡಾ. ನಿರಂಜನಾರಾಧ್ಯಾ ವಿ.ಪಿ. ಹೇಳಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು ಕೋವಿಡ್ ಬಳಿಕ ಶಾಲೆಗಳು ಪ್ರಾರಂಭವಾದಾಗ ಮಕ್ಕಳ ಕಲಿಕೆಗೆ ತೀವ್ರ ಹಿನ್ನಡೆ ಆಗಿರುವುದನ್ನು ತುಂಬಿಕೊಡುವ ಮೂಲಕ ಮಕ್ಕಳ ಕಲಿಕೆಯನ್ನು ಮುಖ್ಯ ವಾಹಿನಿಗೆ ತರಬೇಕೆಂದು ಸಮನ್ವಯ ವೇದಿಕೆ ಸರಕಾರವನ್ನು ಒತ್ತಾಯಿಸುತ್ತಿದೆ ಈ ಸರಕಾರ ನ್ಯಾಯಯುತ ಬೇಡಿಕೆಗೆ ಸ್ಪಂದಿಸುವ ಬದಲು ಆತುರವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ತರಾತುರಿಯಲ್ಲಿದೆ ಎಂದರು.

ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಸಿಗಬೇಕಾದ ಸಮವಸ್ತ್ರ, ಶೂ ಮತ್ತು ಸಾಕ್ಸ್ ವಿಚಾರದಲ್ಲಿ ಗೊಂದಲ ಸೃಷ್ಟಿಸಿ, ನಮ್ಮ ವೇದಿಕೆಯ ಒತ್ತಾಯಿಸಿದ ಮೇಲೆ ಅವುಗಳನ್ನು ಒದಗಿಸುವ ಬಗೆ ಮುಖ್ಯಮಂತ್ರಿಗಳು ತೀರ್ಮಾನಿಸಿದರು. ಆದರೆ 8ನೇ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಈ ವರ್ಷ ಸೈಕಲ್ ವಿತರಣೆ ಮಾಡಲೇ ಇಲ್ಲ. ಇದಲ್ಲದೆ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಮೊಟ್ಟೆ ವಿಚಾರದಲ್ಲೂ ಗೊಂದಲ ಸೃಷ್ಟಿ ಮಾಡಲಾಯಿತು. ರಾಜ್ಯದ ಕೆ.ಪಿ.ಎಸ್. ಶಾಲೆಗಳಲ್ಲಿ ಪಾಲಕರ ಪರಿಷತ್ತಿನಿಂದ ಆಯ್ಕೆಯಾದ ಪಾಲಕರ ಪ್ರತಿನಿಧಿ ಅಧ್ಯಕ್ಷರನ್ನು ಬದಲಾಯಿಸಿ, ಅಲ್ಲಿ ಶಾಸಕರನ್ನು ಅಧ್ಯಕ್ಷರಾಗಲು ಅನುಕೂಲವಾಗುವಂತೆ ಸುತ್ತೋಲೆಯನ್ನು ಮಾರ್ಪಡಿಸಿ, ಶಿಕ್ಷಣ ಕ್ಷೇತ್ರದಲ್ಲೂ ರಾಜನೀತಿ ತರಲಾಯಿತು. ಆದ್ದರಿಂದ ಈ ಎಲ್ಲಾ ಸಮಸ್ಯೆಗಳಿಂದ ಹೊರಬಂದು ಶಾಲಾ ಶಿಕ್ಷಣವನ್ನು ಗಟ್ಟಿಗೊಳಿಸಲು ಸರಕಾರ ಕೆಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಮನ್ವಯ ವೇದಿಕೆಯ ಒಕ್ಕೊರಲಿನಿಂದ ಒತ್ತಾಯಿಸುತ್ತದೆ ಎಂದು ಪ್ರೊ. ಡಾ. ನಿರಂಜನಾರಾಧ್ಯಾ ಆಗ್ರಹಿಸಿದರು.

ರಾಜ್ಯ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ಸರಕಾರದ ಮುಂದೆ ಶಾಲಾ ಶಿಕ್ಷಣವನ್ನು ಗಟ್ಟಿಗೊಳಿಸಲು ಆಗ್ರಹಿಸಿದೆ. ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯ್ಕೆಯ ಸಮರ್ಪಕ ಜಾರಿಗೆ ಕ್ರಮ. ಕೆ.ಪಿ.ಎಸ್ ಶಾಲೆಗಳಲ್ಲಿ ಶಾಸಕರನ್ನು ಅಧ್ಯಕ್ಷರನ್ನಾಗಿಸುವ ಮಾರ್ಪಾಡು ಸುತ್ತೋಲೆಯನ್ನು ಕೈಬಿಟ್ಟು, ಪಾಲಕರ ಚುನಾಯಿತ ಪ್ರತಿನಿಧಿಗಳಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಲು ಕ್ರಮ ಶಿಕ್ಷಣದ ರಾಜಕೀಕರಣ ಮತ್ತು ಕೋಮುವಾದಿಕರಣವನ್ನು ನಿಲ್ಲಿಸಿ ವೈಜ್ಞಾನಿಕ ತಳಹದಿ ಮೇಲೆ ಗುಣಮಟ್ಟ ಶಿಕ್ಷಣವನ್ನು ಒದಗಿಸಲು ಕ್ರಮ ಆಗಬೇಕಿದೆ. 8 ನೇ ತರಗತಿ ಮಕ್ಕಳಿಗೆ ಕೂಡಲೇ ಬೈಸಿಕಲ್ ವಿತರಣೆಗೆ ಅನುದಾನ ಬಿಡುಗಡೆ, ಎಲ್ಲ ಎಸ್.ಡಿ.ಎಮ್.ಸಿ ಸದಸ್ಯರಿಗೆ ಅವರ ಅಧಿಕಾರ ಮತ್ತು ಕರ್ತವ್ಯಗಳನ್ನು ತಿಳಿಸುವ ಅಗತ್ಯ ತರಬೇತಿ ಶಿಕ್ಷಣ ಹಕ್ಕು ಕಾಯ್ದೆ ಆಶಯದಂತೆ ಶಾಲಾ ಹಂತದ ಎಸ್.ಡಿ.ಎಮ್.ಸಿ ಗಳು ಸ್ಥಳೀಯ ಪ್ರಾಧಿಕಾರದ ಭಾಗವಾಗಿ ಕೆಲಸ ನಿರ್ವಹಿಸಲು ಅನುವಾಗುವಂತೆ ಪಂಚಾಯಿತಿ ಮಾದರಿಯಲ್ಲಿಯೇ ಎಸ್.ಡಿ.ಎಮ್.ಸಿ ಅಧಿಕಾರದ ಅವಧಿಯನ್ನು 5 ವರ್ಷಕ್ಕೆ ವಿಸ್ತರಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ಜಿಲ್ಲಾಧ್ಯಕ್ಷೆ ಶಾಂತಿ ಮುಂಡರಗಿ, ಧಾರವಾಡ ಜಿಲ್ಲಾಧ್ಯಕ್ಷ ಈರಣ್ಣು ಮುಂಡಗೋಡ, ಬೆಳಗಾವಿ ಮತ್ತು ಚಿಕ್ಕೊಡಿ ಜಿಲ್ಲಾಧ್ಯಕ್ಷ ಶಂಕರ ಬಸಪ್ಪನವರು ರಾಮನಗರ ಜಿಲ್ಲಾಧ್ಯಕ್ಷ ಉಮೇಶ ದೊಡ್ಡ ರಂಗನವಾಡಿ, ಐ.ಡಿ. ಫಾರ್ ಚೇಂಜ್ ಸಂಸ್ಥೆಯ ಶೈಕ್ಷಣಿಕ ಕಾರ್ಯಕ್ರಮ ಸಂಯೋಜಕಿ ಗಿರಿಜಾ ಎಂ.ಪಿ. ಇದ್ದರು.

Similar News