ಯುವ ಸಂಶೋಧಕರಿಗೆ ಅಧ್ಯಯನ ಶಿಸ್ತು ಕಲಿಸುವುದು ಇಂದಿನ ಅಗತ್ಯ: ಡಾ.ಚಿನ್ನಪ್ಪ ಗೌಡ

ಪೊಳಲಿ ಶೀನಪ್ಪ ಹೆಗ್ಗಡೆ-ಎಸ್.ಆರ್.ಹೆಗ್ಡೆ ಪ್ರಶಸ್ತಿ ಪ್ರದಾನ

Update: 2022-11-19 10:15 GMT

ಉಡುಪಿ, ನ.19: ಜಾನಪದ ಎಂಬುದು ಸಮುದಾಯ ಕುರಿತ ಅಧ್ಯಯನ ಹಾಗೂ ಜನರ ಜ್ಞಾನದ ಅನಾವರಣ ಆಗಿದೆ. ಆದುದರಿಂದ ಅದು ಕೇವಲ ದೇಶಿ, ತುಳುವಿನ ಶಿಸ್ತು ಮಾತ್ರಲ್ಲ, ಅದು ಅಂತಾರಾಷ್ಟ್ರೀಯ ಶಿಸ್ತು ಆಗಿದೆ. ಕರಾವಳಿ ಭಾಗದ ಸಂಸ್ಕೃತಿ ಹಾಗೂ ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡುವ ಯುವ ಮನಸ್ಸುಗಳಿಗೆ ಸರಿಯಾದ ಅಧ್ಯಯನದ ವಿಧಾನ ಹಾಗೂ ಶಿಸ್ತು ಕಲಿಸಿ ಕೊಡುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಂಶೋಧನಾ ಸಂಸ್ಥೆಗಳು ಆಲೋಚನೆ ಮಾಡಬೇಕಾಗಿವೆ ಎಂದು ವಿಶ್ರಾಂತ ಕುಲಪತಿ, ಜಾನಪದ ತಜ್ಞ ಹಾಗೂ ಸಂಶೋಧಕ ಡಾ.ಕೆ.ಚಿನ್ನಪ್ಪ ಗೌಡ ಹೇಳಿದ್ದಾರೆ.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ವತಿಯಿಂದ ಶನಿವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಪ್ರದಾನ ಮಾಡಲಾದ ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್.ಹೆಗ್ಡೆ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡುತಿದ್ದರು.

ಗಂಭೀರ, ಪ್ರಬುದ್ಧ ಹಾಗೂ ಬದ್ಧತೆಯ ಅಧ್ಯಯನ ತುಳುವಿಗೆ ಬಹಳ ಅಗತ್ಯವಿದೆ. 1985ರಿಂದ 20-25ವರ್ಷಗಳು ತುಳು ಜಾನಪದದ ಗಂಭೀರ ಅಧ್ಯಯನದ ಕಾಲಘಟ್ಟಗಳಾಗಿವೆ. ವ್ಯವಸ್ಥಿತ ಅಧ್ಯಯನ ಅಂದರೆ ಇರುವ ಜ್ಞಾನವನ್ನು ಇನ್ನಷ್ಟು ವಿಸ್ತರಿಸುವುದಾಗಿದೆ. ಈಗಿನ ಸಂಶೋಧನಾ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ಸುಲಭದ ದಾರಿಗಳನ್ನು ಹುಡುಕುತ್ತಿದ್ದಾರೆ. ಆದರೆ ಸುಲಭದ ವಿಧಾನ ಎಂಬುದು ಸಂಶೋಧನೆ, ಅಧ್ಯಯನಗಳಿಲ್ಲ ಎಂದರು.

ಮಾತು ಮತ್ತು ಗ್ರಂಥಗಳ ಪ್ರಕಟಣೆ ಎಂಬುದು ಸಂಶೋಧನೆ ಎರಡು ಅಭಿವ್ಯಕ್ತಿಯ ಮುಖಗಳು. ಆದರೆ ಇಂದು ಮಾತಿನೊಂದಿಗೆ ವಿಷಯಗಳ ಬಗ್ಗೆ ವಿಶೇಷ ಅಧ್ಯಯನ, ಪರಿಣತಿ ಇಲ್ಲದೆ ಅದನ್ನು ಸ್ವೀಕರಿಸುವ ಮಾಧ್ಯಮಗಳು ಹೆಚ್ಚಾಗಿವೆ. ತಜ್ಞತೆ ಎಂಬುದು ದೀರ್ಘಕಾಲಜ ತಪಸ್ಸಿನಿಂದ ಬರಬೇಕು. ತಜ್ಞತೆ ಬಗ್ಗೆ ಮಿತಿ ಇರಬೇಕು. ಆದರೆ ಇಂದು ಎಲ್ಲವನ್ನು ಮಾತನಾಡುವ ವ್ಯಕ್ತಿ ತಜ್ಞ, ವಿದ್ವಾಂಸರಾಗುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಅಧ್ಯಕ್ಷತೆಯನ್ನು ನಿವೃತ್ತ ಕುಲಪತಿ, ಜಾನಪದ ವಿದ್ವಾಂಸ ಡಾ.ಬಿ.ಎ. ವಿವೇಕ ರೈ ವಹಿಸಿದ್ದರು. ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಉಪನ್ಯಾಸಕಿ ಡಾ.ಸುಧಾರಾಣಿ ಅಭಿನಂದನಾ ಭಾಷಣ ಮಾಡಿದರು. ಬೆಳ್ತಂಗಡಿ ವಾಣಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ.ಯದುಪತಿ ಗೌಡ ‘ಜಾನಪದ ಮತ್ತು ಸಂಸ್ಕೃತಿ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಎಸ್.ಆರ್.ಹೆಗ್ಡೆ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷೆ ಡಾ.ಇಂದಿರಾ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿನಿ ಪಲ್ಲವಿ ಕೊಡಗು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Similar News