ಭಟ್ಕಳ: ರಾಜ್ಯಮಟ್ಟದ ಕಿವುಡರ ಕ್ರಿಕೆಟ್ ಪಂದ್ಯಾಟ

Update: 2022-11-19 11:31 GMT

ಭಟ್ಕಳ: ಕರ್ನಾಟಕ ರಾಜ್ಯ ಕಿವುಡರ ಸ್ಪೋರ್ಟ್ಸ್ ಫೆಡರೇಶನ್ ಹಾಗೂ ಉ.ಕ ಜಿಲ್ಲಾ ಕಿವುಡ ಮತ್ತು ಮೂಕ ಸಂಘ ಇದರ ಜಂಟಿ ಆಶ್ರಯದಲ್ಲಿ 8ನೆ ರಾಜ್ಯಮಟ್ಟದ ಕಿವುಡ ಮತ್ತು ಮೂಗರ ಟಿ-20 ಕ್ರಿಕೇಟ್ ಪಂದ್ಯಾವಳಿಯನ್ನು ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ ಶುಕ್ರವಾರ  ಉದ್ಘಾಟಿಸಿದರು. 

ನಂತರ ಮಾತನಾಡಿದ ಅವರು, 8ನೇ ರಾಜ್ಯಮಟ್ಟದ ಕಿವುಡರ ಕ್ರಿಕೆಟ್ ಪಂದ್ಯಾವಳಿಯನ್ನು ಭಟ್ಕಳದಲ್ಲಿ ಆಯೋಜಿಸುತ್ತಿರುವುದು ಸಂತಸದ ವಿಚಾರ. ಇದು ಭಟ್ಕಳಕ್ಕೆ ಮಾತ್ರವಲ್ಲ ಇಡೀ ಉತ್ತರಕನ್ನಡ ಜಿಲ್ಲೆಗೆ ಹೆಮ್ಮೆಯ ಸಂಗತಿ. ಸಂಘವು ಮಾಡಿರುವ ವ್ಯವಸ್ಥೆಗಳನ್ನು ಶ್ಲಾಘಿಸಿದ ಅವರು ತಮ್ಮ ಸಂಪೂರ್ಣ ಸಹಕಾರವನ್ನು ಭರವಸೆ ನೀಡಿದರು.

ನವೆಂಬರ್ 20 ರಂದು ತಾಲೂಕಾ ಮೈದಾನದಲ್ಲಿ ಸಂಜೆ 5 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. 
ಭಟ್ಕಳ ಸಹಾಯಕ ಆಯುಕ್ತೆ ಮಮತಾದೇವಿ, ಅಖಿಲ ಭಾರತ ಕಿವುಡರ ಕ್ರೀಡಾ ಮಂಡಳಿ ನವದೆಹಲಿ ತಾಂತ್ರಿಕ ನಿರ್ದೇಶಕ ಗಣೇಶ್ ರಾವ್, ಕರ್ನಾಟಕ ಕಿವುಡರ ಕ್ರೀಡಾ ಫೆಡರೇಶನ್ ಬೆಂಗಳೂರು ಪ್ರಧಾನ ಕಾರ್ಯದರ್ಶಿ ಜಿ.ಎಸ್.ನವೀನ್ ಕುಮಾರ್, ಉತ್ತರಕನ್ನಡ ಜಿಲ್ಲಾ ಕಿವುಡ ಸಂಘದ ಅಧ್ಯಕ್ಷ ಹೊನ್ನಯ್ಯ ಮೊಗೇರ್, ಪ್ರಧಾನ ಕಾರ್ಯದರ್ಶಿ ಯೂಸೂಫ್ ಮೋಟಿಯಾ, ಉತ್ತರಾಖಂಡ ಕಿವುಡರ ಸಂಘದ ಸಲಹೆಗಾರರಾದ ದಿವ್ಯಶ್ರೀ ವೈದ್ಯ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಪೋಷಕ ಅಬ್ದುಸ್ ಸಲಾಂ ಶಾಬಂದ್ರಿ  ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

20ತಂಡಗಳು ಭಾಗಿ: ಶುಕ್ರವಾರ ಆರಂಭಗೊಂಡ ರಾಜ್ಯ ಕಿವುಡರ ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಂಗಳೂರು, ಮೈಸೂರು, ಹಾಸನ, ಶಿವಮೊಗ್ಗ, ಕಲಬುರ್ಗಿ ಹಾಗೂ ಉ.ಕ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 16 ಪುರುಷ ಹಾಗೂ 4 ಮಹಿಳಾ ತಂಡಗಳು ಭಾಗವಹಿಸಿವೆ.  ಮೂರು ದಿನಗಳ ಕಾಲ ನಡೆಯುವ ಈ ಪಂದ್ಯಾವಳಿಯು ಭಟ್ಕಳದ ಅಂಜುಮನ್ ಕಾಲೇಜು ಮೈದಾನ ಹಾಗೂ ತಾಲೂಕು ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ನ.20 ರಂದು ತಾಲೂಕು ಕ್ರೀಡಾಂಗದಲ್ಲಿ ಅಂತಿಮ ಪಂದ್ಯ ನಡೆಯಲಿದ್ದು ಅಲ್ಲಿಯೆ ಸಮಾರೋಪ ಸಮಾರಂಭವೂ ಜರುಗಲಿದೆ.

Similar News