×
Ad

ವಿಶ್ವದಲ್ಲಿ ಸಾಮರಸ್ಯ, ದೇಶದ ಅಭಿವೃದ್ಧಿಗೆ ಕೊಡುಗೆಯನ್ನು ನೀಡಿ: ವಿದ್ಯಾರ್ಥಿಗಳಿಗೆ ಸಲಹೆಗಾರ ಡಾ.ಸತೀಶ್ ರೆಡ್ಡಿ ಕರೆ

Update: 2022-11-19 19:03 IST

ಮಣಿಪಾಲ: ವಿಶ್ವದಲ್ಲಿ ಸಾಮರಸ್ಯ ಸ್ಥಾಪನೆ ಹಾಗೂ ದೇಶದ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ನೀಡುವಂತೆ ದೇಶದ ಯುವ ಜನತೆಗೆ ಕೇಂದ್ರ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಡಾ.ಜಿ.ಸತೀಶ್ ರೆಡ್ಡಿ ಕರೆ ನೀಡಿದ್ದಾರೆ.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ)ನ 30ನೇ ಘಟಿಕೋತ್ಸವದ ಎರಡನೇ ದಿನದಂದು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪದವಿ ಪಡೆದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತಿದ್ದರು.

ಭವಿಷ್ಯದ ರಕ್ಷಣಾ ತಂತ್ರಜ್ಞಾನದ ಕುರಿತು ಮಾತನಾಡಿದ ಡಾ.ಸತೀಶ್ ರೆಡ್ಡಿ,  ಇನ್ನು ಮುಂದೆ ಇವುಗಳನ್ನು ಭಾರತದಲ್ಲೇ ರೂಪಿಸಿ, ವಿನ್ಯಾಸವನ್ನು ಅಂತಿಮಗೊಳಿಸಿ, ಅಭಿವೃದ್ಧಿ ಪಡಿಸಿ, ಪರೀಕ್ಷೆಗೊಳಪಡಿಸಿ ಎಲ್ಲವನ್ನೂ ಭಾರತದಲ್ಲೇ ತಯಾರಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದರು.

ಪ್ರಸ್ತುತ ಭಾರತದ ರಕ್ಷಣಾ ಸ್ಟಾರ್ಟ್‌ಅಪ್‌ನ ಸ್ಥಿತಿ-ಗತಿಯನ್ನು ವಿವರಿಸಿದ ಡಾ.ರೆಡ್ಡಿ, ಸರಕಾರದ ತಂತ್ರಜ್ಞಾನ ಅಭಿವೃದ್ಧಿ ನಿಧಿ (ಟಿಡಿಎಫ್), ‘ಡೇರ್ ಟು ಡ್ರೀಮ್’ ಕಾರ್ಯಕ್ರಮಗಳ ಕುರಿತು ವಿವರಿಸಿದರು. ಇವುಗಳು ರಕ್ಷಣಾ ವಿಷಯಕ್ಕೆ ಸಂಬಂಧಿಸಿದಂತೆ ಯುವ ಪ್ರತಿಭೆಗಳನ್ನು ಒಳಗೊಳಿಸುವ ವಿವಿಧ ಕಾರ್ಯಕ್ರಮಗಳಾಗಿವೆ ಎಂದರು.

ಈ ನಿಟ್ಟಿನಲ್ಲಿ ದೇಶದ ವಿದ್ಯಾಸಂಸ್ಥೆಗಳು ಸಂಶೋಧನೆ ಹಾಗೂ ಉದ್ಯಮಶೀಲತೆಯತ್ತ  ವಿದ್ಯಾರ್ಥಿಗಳು ಹೆಚ್ಚೆಚ್ಚು ಆಕರ್ಷಿತರಾಗುವಂತೆ ಒತ್ತು ನೀಡಬೇಕು. ಸಂಶೋದನೆಗೆ ಆದ್ಯತೆ ನೀಡುವಂತೆ ಜ್ಞಾನದ ವಿನಿಮಯಕ್ಕೆ ಆದ್ಯತೆ ನೀಡಿ ಎಂದು ಸಲಹೆ ನೀಡಿದರು.

ಹೊಸ ಆವಿಷ್ಕಾರಗಳು ಬದುಕಿನ ಎಲ್ಲಾ ರಂಗಗಳಲ್ಲೂ ಕಾಣಿಸಿಕೊಳ್ಳುತ್ತಿವೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಹಾಗೂ ಕೈಗಾರಿಕೆ ೪:೦ಗಳು ತಂತ್ರಜ್ಞಾನದಲ್ಲಿ ಸ್ಥಾನ ಪಡೆಯುತ್ತಿವೆ. ಇವುಗಳನ್ನು ನಮ್ಮ ದೈನಂದಿನ ಬದುಕಿನ  ಉನ್ನತೀಕರಣಕ್ಕೆ ಮೆಟ್ಟಿಲಾಗಿಸಿಕೊಳ್ಳುವುದು ನಮ್ಮ ಗುರಿಯಾಗಿರಬೇಕು. ದೇಶವನ್ನು ಬಲಿಷ್ಠವಾಗಿ ರೂಪಿಸುವಲ್ಲಿ ನಮ್ಮ ಯುವಜನಾಂಗ ಖಂಡಿತ ಯಶಸ್ವಿಯಾಗುತ್ತದೆ ಎಂದು ತಮಗೆ ವಿಶ್ವಾಸವಿದೆ ಎಂದು ಡಾ.ಸತೀಶ್ ರೆಡ್ಡಿ ನುಡಿದರು.

ಕಾರ್ಯಕ್ರಮದಲ್ಲಿ ಮಾಹೆ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಮಾಹೆ ಟ್ರಸ್ಟ್‌ನ ಅಧ್ಯಕ್ಷ  ಡಾ.ರಂಜನ್ ಆರ್.ಪೈ, ಮಾಹೆ ಕುಲಪತಿ ಲೆ.ಜ. (ಡಾ) ಎಂ.ಡಿ.ವೆಂಕಟೇಶ್, ಪ್ರೊ ವೈಸ್ ಚಾನ್ಸಲರ್‌ಗಳಾದ ಡಾ.ವೆಂಕಟೇಶ್ ಪ್ರಭು, ಡಾ.ದಿಲೀಪ್ ಜಿ.ನಾಯಕ್, ಡಾ.ಪ್ರಜ್ಞಾ ರಾವ್, ರಿಜಿಸ್ಟ್ರಾರ್‌ಗಳಾದ ಡಾ. ನಾರಾಯಣ ಸಭಾಹಿತ್, ಡಾ.ವಿನೋದ್ ವಿ.ಥಾಮಸ್ ಉಪಸ್ಥಿತರಿದ್ದರು.

ಚಿನ್ನದ ಪದಕ ವಿಜೇತರು: ಘಟಿಕೋತ್ಸವದ ಎರಡನೇ ದಿನದಂದು ಡಾ.ಟಿ.ಎಂ.ಎ.ಪೈ ಸ್ಮಾರಕ ಚಿನ್ನದ ಪದಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳು. ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ವೆಟ್ಸಾ ವೈಷ್ಣವಿ,  ಪಿಸಿಪಿಎಸ್‌ನ ಜೆನಿಲ್ಡಾ ಜಾಸ್ಮಿನ್ ಮೆಥಾಯಸ್, ಮಣಿಪಾಲ ಸ್ಕೂಲ್ ಆಫ್ ಆರ್ಕಿಟೆಕ್ಟ್‌ನ ಅರ್ಚನಾ ಶಿವಪ್ರಕಾಶ್, ಪ್ರಸನ್ನ ಸ್ಕೂಲ್ ಆಫ್‌ಪಬ್ಲಿಕ್ ಹೆಲ್ತ್‌ನ  ಜೊಸ್ಸಿಲ್ ಜೋತ್ಸ್ನಾ ಜೋಸೆಫ್ ನಜ್ರತ್ ಹಾಗೂ ಮಣಿಪಾಲ ಡೆಂಟಲ್ ಸಾಯನ್ಸ್‌ನ ರೂಪ್ಸಾ ತಾರಪ್ದಾರ್.

Similar News