ನನಗೆ ಟ್ವಿಟರ್‌ ಗೆ ಮರಳಲು ಆಸಕ್ತಿಯಿಲ್ಲ: ಖಾತೆ ಮರುಸ್ಥಾಪನೆಯ ಬಳಿಕ ಡೊನಾಲ್ಡ್‌ ಟ್ರಂಪ್‌ ಹೇಳಿಕೆ

Update: 2022-11-20 08:00 GMT

ನ್ಯೂಯಾರ್ಕ್: ಟ್ವಿಟರ್ ಮಾಲಕ ಎಲೋನ್ ಮಸ್ಕ್ ಅವರು ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಮರುಸ್ಥಾಪಿಸುವುದಾಗಿ ಘೋಷಿಸಿದ ನಂತರ, ಮಾಜಿ ಯುಎಸ್ ಅಧ್ಯಕ್ಷ ಟ್ರಂಪ್ "ಟ್ವಿಟರ್‌ಗೆ ಮರಳಲು‌ ನಾನು ಆಸಕ್ತಿ ಹೊಂದಿಲ್ಲ" ಎಂದು ಹೇಳಿದ್ದಾರೆ. ಟ್ರಂಪ್ ಅವರನ್ನು ಟ್ವಿಟರ್‌ನಲ್ಲಿ ಮರುಸ್ಥಾಪಿಸಬೇಕೇ ಅಥವಾ ಬೇಡವೇ ಎಂದು ಜನರನ್ನು ಕೇಳುವ ಸಮೀಕ್ಷೆಯನ್ನು ಎಲೋನ್ ಮಸ್ಕ್ ನಡೆಸಿದ ನಂತರ ಟ್ರಂಪ್ ಅವರ ಖಾತೆಯನ್ನು ಮರುಸ್ಥಾಪಿಸಲಾಗಿತ್ತು.

"ಇಲ್ಲಿ ನಾನು ಸೂಕ್ತವಾದ ಯಾವುದೇ ಕಾರಣವನ್ನು ಕಾಣುತ್ತಿಲ್ಲ" ಎಂದು ಡೊನಾಲ್ಡ್‌ ಟ್ರಂಪ್ ವಿಡಿಯೋ ಮೂಲಕ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಯುಎಸ್ ಮಾಜಿ ಅಧ್ಯಕ್ಷರ ಖಾತೆಯನ್ನು ಮರುಸ್ಥಾಪಿಸುವ ಪರವಾಗಿ ಅಲ್ಪ ಬಹುಮತವು ಸಮೀಕ್ಷೆಯಲ್ಲಿ ಬಂದಿತ್ತು. ಹಿಂಸಾಚಾರವನ್ನು ಪ್ರಚೋದಿಸಿದ ಆರೋಪದ ಮೇಲೆ ಟ್ವಿಟರ್‌ ನಿಂದ ಅವರ ಖಾತೆಯನ್ನು ನಿಷೇಧಿಸಲಾಗಿತ್ತು. ಎಲೋನ್ ಮಸ್ಕ್ ಅವರು ಮಾಜಿ ಅಧ್ಯಕ್ಷರ ಮೇಲಿನ 22 ತಿಂಗಳ ಅಮಾನತು ತೆಗೆದುಹಾಕುವುದಾಗಿ ಘೋಷಿಸಿದ ನಂತರ ಡೊನಾಲ್ಡ್ ಟ್ರಂಪ್ ಅವರ ನಿರ್ಬಂಧಿಸಲಾದ ಟ್ವಿಟರ್ ಖಾತೆಯು ವೇದಿಕೆಯಲ್ಲಿ ಮತ್ತೆ ಕಾಣಿಸಿಕೊಂಡಿದೆ.  15 ಮಿಲಿಯನ್ ಟ್ವಿಟರ್ ಬಳಕೆದಾರರು ಸಮೀಕ್ಷೆಯಲ್ಲಿ ಮತ ಚಲಾಯಿಸಿದ್ದಾರೆ ಮತ್ತು 51.8% ಮರುಸ್ಥಾಪನೆಯ ಪರವಾಗಿ ಮತ ಚಲಾಯಿಸಿದ್ದಾರೆ.

"ಜನರು ಮಾತನಾಡಿದ್ದಾರೆ. ಟ್ರಂಪ್ ಅವರನ್ನು ಪುನಃ ಸ್ಥಾಪಿಸಲಾಗುವುದು" ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ. ಅವರು ಲ್ಯಾಟಿನ್ ನುಡಿಗಟ್ಟು "ವೋಕ್ಸ್ ಪಾಪುಲಿ, ವೋಕ್ಸ್ ಡೀ" ಅನ್ನು ಸಹ ಬಳಸಿದರು, ಇದನ್ನು "ಜನರ ಧ್ವನಿ ದೇವರ ಧ್ವನಿ" ಎಂದು ಅನುವಾದಿಸಬಹುದಾಗಿದೆ.

Similar News