ಜ.13-15ರವರೆಗೆ ಉಡುಪಿಯಲ್ಲಿ ‘ಪವರ್ ಪರ್ಬ’ ಮೇಳ

Update: 2022-11-20 12:14 GMT

ಉಡುಪಿ, ನ.20: ಉಡುಪಿಯ ಪವರ್ ಸಂಸ್ಥೆಯ ವತಿಯಿಂದ ಉಡುಪಿ ಜಿಲ್ಲಾ ರಜತ ಮಹೋತ್ಸವ ಸಮಿತಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಜಿ ಟ್ವೆಂಟಿ ಒನ್ ಅರ್ತ್ ಒನ್ ಫ್ಯಾಮಿಲಿ, ಒನ್ ಫ್ಯೂಚರ್ ಇವುಗಳ ಸಂಯುಕ್ತ ಸಹಕಾರದೊಂದಿಗೆ ಪವರ್ ಪರ್ಬ ಕಾರ್ಯಕ್ರಮವನ್ನು ಜ.13ರಿಂದ 15ರವರೆಗೆ ಬೀಡಿನಗುಡ್ಡೆಯ ಬಯಲು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪವರ್ ಸಂಸ್ಥೆ ಅಧ್ಯಕ್ಷೆ ಪೂನಂ ಶೆಟ್ಟಿ ತಿಳಿಸಿದ್ದಾರೆ.

ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಮೇಳದಲ್ಲಿ ಸುಮಾರು 125 ರಿಂದ 150 ಗುಣಮಟ್ಟದ ಸ್ಟಾಲ್‌ಗಳಲ್ಲಿ ಉತ್ಪನ್ನಗಳ/ಸೇವೆಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಮಹಿಳೆಯರಿಗೆ ಅವಕಾಶವಿದೆ. ವಿಶಿಷ್ಟ ಆಹಾರ ಮಳಿಗೆಗಳು, ವಿಶೇಷ ಆಟದ ವಲಯ ಜತೆಗೆ ಬೇರೆ ಬೇರೆ ರೀತಿಯ ಸ್ಪರ್ಧೆಗಳು ನಡೆಯಲಿವೆ ಎಂದರು.

ಸೂಕ್ಷ್ಮ ಹಾಗೂ ಸಣ್ಣ ಉದ್ದಿಮೆದಾರರು ಎಂಎಸ್‌ಎಅಇನಲ್ಲಿ ನೋಂದಣಿ ಮಾಡಿಕೊಂಡರೆ ಪವರ್ ಪರ್ಬದಲ್ಲಿ ಭಾಗವಹಿಸಿ ಪಾವತಿಸುವ ಬಾಡಿಗೆಯ ಶುಲ್ಕವನ್ನು ಹಿಂದೆ ಪಡೆಯುವುದಕ್ಕೆ ಅವಕಾಶವಿದೆ. ಇದಕ್ಕೆ  ನೋಂದಣಿ ಕಡ್ಡಾಯ. ಆನ್‌ಲೈನ್‌ನಲ್ಲಿ ನೋಂದಾಣಿ ಆಗಬಹುದು. ಈ ರೀತಿಯ ಮೇಳ ದಲ್ಲಿ ಭಾಗವಹಿಸಿ ಪಾವತಿಸಿದ ಶುಲ್ಕದ ರಶೀದಿಯನ್ನು ಆನ್‌ಲೈನ್ ಮೂಲಕವೇ ಎಂಎಸ್‌ಎಅಇಗೆ ಅರ್ಜಿ ಸಲ್ಲಿಸಿದಾಗ ಆ ಶುಲ್ಕ ಮರುಪಾವತಿ ಯಾಗುತ್ತದೆ. ಸುಮಾರು 60 ಉದ್ಯಮಿಗಳಿಗೆ ಈ ಸೌಲಭ್ಯ ಪಡೆಯುವುದಕ್ಕೆ ಅವಕಾಶವಿದೆ. ಹೀಗಾಗಿ ಶೀಘ್ರವೇ ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಿ ಎಂದು ಎಂಎಸ್‌ಎಅಇ ಆ್ಯಂಡ್ ಡಿಎಫ್‌ಒ ಜಂಟಿ ನಿರ್ದೇಶಕ ದೇವರಾಜ್ ಕೆ. ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪವರ್ ಸಂಸ್ಥೆ ಸಂಸ್ಥಾಪಕಿ ಅಧ್ಯಕ್ಷೆ ರೇಣು ಜಯರಾಮ್, ಸಂಘಟನಾ ಕಾರ್ಯದರ್ಶಿ ದೀನಾ ಪ್ರಭಾಕರ್, ಕೋಶಾಕಾರಿ ಪ್ರತಿಭಾ ಆರ್.ವಿ., ನಿಕಟಪೂರ್ವ ಅಧ್ಯಕ್ಷೆ ಶ್ರುತಿ ಶೆಣೈ ಉಪಸ್ಥಿತರಿದ್ದರು.

Similar News