×
Ad

ಬಡ ದಲಿತ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಟ್ಟ ಜಮಾಅತೆ ಇಸ್ಲಾಮಿ ಹಿಂದ್

Update: 2022-11-20 17:52 IST

ಉಡುಪಿ: ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ಹೂಡೆ ಶಾಖೆಯಿಂದ ಪಡುತೋನ್ಸೆ- ಗುಜ್ಜರಬೆಟ್ಟುವಿನ ಆರ್ಥಿಕ ಹಿಂದುಳಿದ ದಲಿತ ಮಹಿಳೆ ಶುಭಲಕ್ಷ್ಮಿ ಅವರಿಗೆ ವಾಸ್ತವ್ಯಕ್ಕಾಗಿ ನಿರ್ಮಿಸಿದ ಮನೆಯನ್ನು ಶನಿವಾರ  ಹಸ್ತಾಂತರಿಸಲಾಯಿತು.

ಮನೆಯ ಕೀಲಿಗೈ ಹಸ್ತಾಂತರಿಸಿದ ಡಾ.ಶಹಾನವಾಝ್ ಮಾತನಾಡಿ,   ಜಮಾಅತೆ ಇಸ್ಲಾಮಿ ಹಿಂದ್ ಜನರ ಅಗತ್ಯಕ್ಕಾಗಿ ಮನೆಗಳನ್ನಷ್ಟೇ ನಿರ್ಮಿಸಿ ಕೊಡುವುದಲ್ಲ, ಬದಲಾಗಿ ಕೋವಿಡ್ ಸಂದರ್ಭದಲ್ಲಿ ಜನರ ಸಮಸ್ಯೆ ಗಳನ್ನು ನೀಗಿಸುವಲ್ಲಿ ದೊಡ್ಡ ಪ್ರಮಾಣದಲ್ಲಿ ನೆರವಾಗಿದೆ. ನಿರುದ್ಯೋಗಿಗಳಿಗೆ ಸ್ವಉದ್ಯೋಗದ ಸಲಕರಣೆಗಳನ್ನು ಒದಗಿಸುವ ಚಟುವಟಿಕೆಗಳನ್ನು ನಡೆಸುತಿದೆ ಹಾಗೂ ವಿವಿಧ ರೀತಿಯಲ್ಲಿ ಸಮಾಜಸೇವೆ ಮಾಡುತ್ತಾ ಬಂದಿದೆ ಎಂದರು.

ದಲಿತ ಚಿಂತಕ ನಾರಾಯಣ ಮಣೂರು ಮಾತನಾಡಿ, ಜನರ ನೋವುಗಳಿಗೆ ಈ ರೀತಿಯೂ ಸ್ಪಂದಿಸಬಹುದು ಎಂಬುದನ್ನು ಜಮಾಅತೆ ಇಸ್ಲಾಮಿ ಹಿಂದ್ ತೋರಿಸಿ ಕೊಟ್ಟಿದೆ. ಜಾತಿಧರ್ಮಗಳ ಮೇರೆಯನ್ನು ಮೀರಿ ಸಮಾಜದ ಕಣ್ಣೀರು ಒರೆಸಿ ಆಸರೆ ಕಲ್ಪಿಸುವುದು ಒಂದು ಹೊರಾಟವೇ ಆಗಿದೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೋರಾಟದ ಉದ್ದೇಶ ಜನರ ನೋವಿಗೆ ಆಸರೆಯಾಗುದೇ ಆಗಿತ್ತು ಎಂದರು.

ಅಧ್ಯಕ್ಷತೆಯನ್ನು ತೋನ್ಸೆ-ಹೂಡೆ ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಅಬ್ದುಲ್ ಕಾದರ್ ವಹಿಸಿದ್ದರು. ಈ ಸಂದರ್ಭದಲ್ಲಿ ಉಡುಪಿ ಇಸ್ಲಾಮಿಕ್ ವೆಲ್ಫೇರ್ ಸೊಸೈಟಿನ ರಿಯಾಝ್ ಅಹಮದ್ ಕುಕ್ಕಿಕಟ್ಟೆ, ತೋನ್ಸೆ ಗ್ರಾಪಂ ಕಾರ್ಯದರ್ಶಿ ದಿನಕರ್ ಬೇಂಗ್ರೆ, ಸತೀಶ್ ಮಲ್ಪೆ, ಗ್ರಾಪಂ ಸದಸ್ಯ ಸುಝನಾ ಡಿಸೋಜ ಮಾತನಾಡಿದರು.

ಪಂಚಾಯತ್ ಸದಸ್ಯರಾದ ವಿಜಯ ಪಡುಕುದ್ರು, ಮಹೇಶ್ ಹೂಡೆ, ಕುಸುಮ ಗುಜ್ಜರಬೆಟ್ಟು, ಆಶಾ ತಿಮ್ಮಣ್ಣ ಕುದ್ರು, ಯಶೋದ ಕೆಮ್ಮಣ್ಣು, ಎಚ್.ಆರ್.ಎಸ್’ನ ಹಸನ್ ಕೋಡಿಬೇಂಗ್ರೆ, ಝೈನುಲ್ಲಾ ಹೂಡೆ, ಎಸ್.ಐ.ಓ ಜಿಲ್ಲಾಧ್ಯಕ್ಷ ಅಫ್ವಾನ್ ಹೂಡೆ, ಮನೆಯನ್ನು ಪಡೆದ ಶುಭಲಕ್ಷ್ಮಿ ಉಪಸ್ಥಿತರಿದ್ದರು. ಮೌಲಾನಾ ತಾರೀಕ್ ಕುರಾನ್ ಪಠಿಸಿದರು. ಸಾಲಿಡಾರಿಟಿ ಯೂತ್ ಮೂಮೆಂಟ್‌ನ ಯಾಸೀನ್ ಕೋಡಿಬೇಂಗ್ರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Similar News