ಶಂಕಿತ ಕಲ್ಲಿದ್ದಲು ಕಳ್ಳರು ಮತ್ತು ಸಿಐಎಸ್ಎಫ್ ನಡುವೆ ಘರ್ಷಣೆ: ಗುಂಡಿನ ದಾಳಿಯಲ್ಲಿ ನಾಲ್ವರು ಸಾವು

Update: 2022-11-21 07:22 GMT

ಧನಬಾದ್: ಜಾರ್ಖಂಡ್‌ನ (Jharkhand) ಧನ್‌ಬಾದ್‌ನಲ್ಲಿ ರಾತ್ರಿ ಒಂದು ಗಂಟೆ ಸುಮಾರಿಗೆ ಶಂಕಿತ ಕಲ್ಲಿದ್ದಲು ಕಳ್ಳರು ಮತ್ತು ಸಿಐಎಸ್‌ಎಫ್ (CISF) ನಡುವೆ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ, ನಾಲ್ವರು ಶಂಕಿತ ಕಳ್ಳರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಬಗ್ಮಾರಾ ಪೊಲೀಸ್ ಠಾಣೆ ವ್ಯಾಪ್ತಿಯ ಡುಮ್ರಾದಲ್ಲಿರುವ ಬಿಸಿಸಿಎಲ್‌ನ ಕೆಕೆಸಿ ಸೈಡಿಂಗ್‌ನಲ್ಲಿ ಈ ಘರ್ಷಣೆ ನಡೆದಿದೆ. ಸಿಐಎಸ್ಎಫ್ ಗುಂಡಿನ ದಾಳಿಯಲ್ಲಿ ನಾಲ್ವರು ಕಲ್ಲಿದ್ದಲು ಕಳ್ಳರು ಸಾವನ್ನಪ್ಪಿದ್ದಾರೆ ಎಂದು ಸಿಐಎಸ್‌ಎಫ್‌ ಮೂಲಗಳು ತಿಳಿಸಿವೆ. ಮೃತಪಟ್ಟವರನ್ನು ಪ್ರೀತಮ್ ಚೌಹಾಣ್, ಸೂರಜ್ ಚೌಹಾಣ್, ಶಹಜಾದ್ ಅನ್ಸಾರಿ ಮತ್ತು ಅಲ್ತಾಫ್ ಅನ್ಸಾರಿ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಬಾದಲ್ ರಾವಣಿ ಮತ್ತು ರಮೇಶ್ ರಾಮ್ ಎಂದು ಗುರುತಿಸಲಾಗಿದೆ.

 ಗಾಯಗೊಂಡ ಇಬ್ಬರನ್ನು ಚಿಕಿತ್ಸೆಗಾಗಿ ರಾಂಚಿಯ RIMS ಗೆ ಕಳುಹಿಸಲಾಗಿದೆ.  ರವಿವಾರ ಬೆಳಗ್ಗೆ ಎನ್‌ಕೌಂಟರ್ ಬಗ್ಗೆ ಮಾಹಿತಿ ಬಂದ ತಕ್ಷಣ ಆ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಿದೆ. ಮೃತಪಟ್ಟವರು ಮತ್ತು ಗಾಯಗೊಂಡವರೆಲ್ಲರೂ ಸ್ಥಳೀಯರು ಎಂದು ಹೇಳಲಾಗಿದೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಘಟನಾ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಜಮಾಯಿಸಿದ್ದಾರೆ. ಬಿಸಿಸಿಎಲ್ (ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್)ನ ಬಾಗ್ಮಾರಾದಲ್ಲಿರುವ ಬ್ಲಾಕ್ 2 ಬೆನಿದಿಹ್ ಕೋಲ್ ಸೈಡಿಂಗ್‌ನಲ್ಲಿ ಶನಿವಾರ ರಾತ್ರಿ ಹತ್ತಾರು ಜನರು ದ್ವಿಚಕ್ರ ವಾಹನಗಳಲ್ಲಿ ಕಲ್ಲಿದ್ದಲು ಕದಿಯಲು ಬಂದಿದ್ದರು ಎಂದು ಆರೋಪಿಸಲಾಗಿದೆ.

ಇಲ್ಲಿ ಭದ್ರತೆಯಲ್ಲಿ ನಿಯೋಜನೆಗೊಂಡಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಕ್ವಿಕ್ ರೆಸ್ಪಾನ್ಸ್ ತಂಡ ಅವರನ್ನು ತಡೆಯಲು ಯತ್ನಿಸಿದಾಗ ಎರಡೂ ಕಡೆಯಿಂದ ಘರ್ಷಣೆ ಉಂಟಾಗಿದೆ. ಕಲ್ಲಿದ್ದಲು ಕದಿಯುತ್ತಿದ್ದ ಜನರು ಭದ್ರತಾ ಸಿಬ್ಬಂದಿಗಳ ಕಡೆಗೆ ಕಲ್ಲು ತೂರಾಟ ಆರಂಭಿಸಿದ್ದು, ಪ್ರತಿಯಾಗಿ ಸಿಐಎಸ್ಎಫ್ ಯೋಧರು ಸುಮಾರು 30 ಸುತ್ತು ಗುಂಡು ಹಾರಿಸಿದ್ದಾರೆ. ಗುಂಡು ತಗುಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.  ಕಲ್ಲಿದ್ದಲು ಕಳ್ಳತನ ತಡೆಯುವ ಸಂದರ್ಭದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಯೋಧರಿಂದ ರೈಫಲ್ ಕಸಿದುಕೊಳ್ಳಲು ಯತ್ನಿಸಿದ್ದು, ಈ ವೇಳೆ ಗುಂಡಿನ ದಾಳಿ ನಡೆದು ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಸಿಐಎಸ್‌ಎಫ್ ಹೇಳಿಕೆ ನೀಡಿದೆ.

ಇದನ್ನೂ ಓದಿ: ಫಿಫಾ ವಿಶ್ವಕಪ್‌ ಉದ್ಘಾಟನಾ ವೇದಿಕೆಯಲ್ಲಿ ಕುರ್‌ಆನ್‌ ಪಠಿಸಿದ ಘಾನಿಂ ಅಲ್‌ ಮುಫ್ತಾಹ್‌ ಯಾರು ಗೊತ್ತೇ?

Similar News