ಬೆಳ್ಳೆ ಸೇತುವೆ: ಉಡುಪಿ ಜಿಲ್ಲಾಧಿಕಾರಿಗೆ ಸ್ಥಳೀಯ ಕೃಷಿಕರ ದೂರು

Update: 2022-11-21 13:54 GMT

ಉಡುಪಿ: ಪಡುಬೆಳ್ಳೆ-ಕುಂತಳನಗರ ಹೊಸ ಸಂಪರ್ಕ ರಸ್ತೆಗೆ ಬೆಳ್ಳೆಯಲ್ಲಿ ಪಾಪನಾಶಿನಿ ನದಿಗೆ ಕಟ್ಟಿರುವ ಸೇತುವೆಯ ಅವೈಜ್ಞಾನಿಕ ಕಾಮಗಾರಿ ಯಿಂದ ಮಳೆ ನೀರು ಸರಾಗ ಹರಿಯುವಿಕೆಗೆ ಅಡ್ಡಿಯಾಗಿ ಕೃಷಿ ಮತ್ತು ಜನತೆಗೆ ಆಗುತ್ತಿರುವ ತೊಂದರೆಗಳನ್ನು ಪರಿಹರಿಸುವಂತೆ ಉಡುಪಿ ಜಿಲ್ಲಾ ಕೃಷಿಕ ಸಂಘದ ನೇತೃತ್ವದಲ್ಲಿ ಸ್ಥಳೀಯ ಕೃಷಿಕರು ಕಾವಗಾರಿ ವೀಕ್ಷಣೆಗೆ ತಮ್ಮ ಮನವಿ ಮೇರೆಗೆ ಆಗಮಿಸಿದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಅಧಿಕ ಮಳೆ ಸುರಿಯುವಾಗ ವಿಸ್ತಾರವಾದ ಗದ್ದೆ ಪ್ರದೇಶಗಳಲ್ಲಿ ಸರಾಗವಾಗಿ ಹರಿದು ಹೋಗುತ್ತಿದ್ದ ಮಳೆಗಾಲದ ನೀರು ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸೇತುವೆಯ ಭಾಗದಲ್ಲಷ್ಟೇ ಹರಿಯುವಂತಾಗಿದೆ. ಇದರಿಂದಾಗಿ ಸೇತುವೆಯ ಪೂರ್ವಭಾಗದಲ್ಲಿ ಏಳು ಕಿ.ಮೀ. ಉದ್ದಕ್ಕೂ ಕೃತಕ ನೆರೆ ಸೃಷ್ಟಿಯಾಗಿ, ಕೃಷಿ ಭೂಮಿ ಮುಳುಗಡೆಯಾಗಿ ಕೃಷಿ ನಾಶವಾಗಿದೆ. ಕೆಲವೆಡೆ ಹಿನ್ನೀರಿನಿಂದಾಗಿ ಕೃಷಿಯನ್ನೇ ಸಂಪೂರ್ಣವಾಗಿ ನಿಲ್ಲಿಸುವಂತಾಗಿದೆ ಎಂದು ರೈತರು ದೂರಿದರು.

ನದಿಯ ಎರಡೂ ಮಗ್ಗುಲುಗಳ ಪಡುಬೆಳ್ಳೆ, ತಾಬೈಲು, ದೇವರಗುಡ್ಡೆ, ಗುಡ್ಡೆಟ್ಟು, ಅಂಕುದ್ರು, ಕಟ್ಟಿಂಗೇರಿ, ತರ್ಪಜಾಲು, ಗಂಗೆಲಾ, ದಿಂದೊಟ್ಟು, ಕುರುಡೈ, ಕಬೇಡಿ, ಹೊಸವಕ್ಲು, ಮಟ್ಟಾರು ಪ್ರದೇಶಗಳ ಸುಮಾರು  ಎಂಟು ನೂರು ಹೆಕ್ಟೇರು (ಎರಡು ಸಾವಿರ ಎಕರೆ) ಕೃಷಿ ಪ್ರದೇಶಗಳ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಅಧಿಕ ಮಳೆ ಸುರಿದರೆ ಹಲವೆಡೆ ಹಿನ್ನೀರಿನ ಮಟ್ಟ ಏರಿ ಹಲವರ ಮನೆ, ಆಸ್ತಿ ಮತ್ತು ಪ್ರಾಣ ಹಾನಿಯುಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಮುಖಂಡರು, ಕೃಷಿಕರು ಮಳೆಗಾಲದಲ್ಲಿ ಆಗುತ್ತಿರುವ ತೊಂದರೆ, ಸಮಸ್ಯೆಗಳನ್ನು ಜಿಲ್ಲಾಧಿಕಾರಿಗೆ ವಿವರಿಸಿದರು.

ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಮಾಡಿ ಕೃಷಿಕರ ಸಮಸ್ಯೆಗಳನ್ನು ಮನದಟ್ಟು ಮಾಡಿಕೊಂಡ ಜಿಲ್ಲಾಧಿಕಾರಿ, ಸ್ಥಳಕ್ಕೆ ಇಂಜಿನಿಯರರನ್ನು ಕರೆಸಿ, ಕೃಷಿಕರ ಮನವಿಯಂತೆ  ಮಳೆ ನೀರು ಕೃಷಿಭೂಮಿಯಲ್ಲಿ ಎಲ್ಲೂ ನಿಲ್ಲದೆ ಸರಾಗವಾಗಿ ಹರಿಯಲು ಸೇತುವೆಯ ಇಕ್ಕೆಲಗಳಲ್ಲಿ ಸ್ಪಾನ್ ಇಲ್ಲವೇ ಪೈಪು ಮತ್ತು ಚಾನಲ್ ರಚನೆ ಮಾಡಿ ಕಾಮಗಾರಿ ಮುಂದುವರಿಸಲು ನಿರ್ದೇಶ ನೀಡಿದರು.

ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು, ರವಿ ಪೂಜಾರಿ ಕುರ್ಕಾಲು, ಲೂಕಾಸ್ ಡಿಸೋಜಾ ಬಡಗು ಪಂಜಿಮಾರು, ಬೆಳ್ಳೆ ಗ್ರಾಪಂ ಅಧ್ಯಕ್ಷ ಸುಧಾಕರ ಪೂಜಾರಿ, ಅಜಿತ್ ಶೆಟ್ಟಿ, ಸದಾನಂದ ಶೆಣೈ, ಅಮಿತ, ಪ್ರಮೀಳ, ಲ್ಯಾನ್ಸಿ ಲೂವಿಸ್, ಅನಿತಾ ಆಳ್ವಾ, ಜಲಜ, ಸೆಲಿನಾ, ಉದಯ ಪೂಜಾರಿ, ರೊನಾಲ್ಡ್, ಅರುಣ್ ನೊರೋನ್ಹಾ, ಜೆನ್ನಿ ಡಿಸೋಜಾ, ಅಶೋಕ್ ಶೆಟ್ಟಿ, ಸುದರ್ಶನ್ ಪ್ರಭು, ರಾಬರ್ಟ್ ಸೇರಿದಂತೆ ಅಟ್ಟಿಂಜೆ, ಸೋದೆಮಠ ಬೈಲು, ಬಡಗು ಪಂಜಿಮಾರು ಪ್ರದೇಶಗಳ ಕೃಷಿಕರು ಉಪಸ್ಥಿತರಿದ್ದರು.

Similar News