ದಿಲ್ಲಿ ಸಚಿವರಿಗೆ ಜೈಲಿನಲ್ಲಿ ಮಸಾಜ್‌ ಮಾಡುತ್ತಿದ್ದ ವ್ಯಕ್ತಿ ಪೊಕ್ಸೊ ಕಾಯ್ದೆಯಡಿ ಬಂಧನಕ್ಕೊಳಗಾದ ಆರೋಪಿ !

Update: 2022-11-22 07:27 GMT

ಹೊಸದಿಲ್ಲಿ: ದಿಲ್ಲಿ ಸಚಿವ ಸತ್ಯೇಂದ್ರ ಜೈನ್‌ ಅವರು ಜೈಲಿನಲ್ಲಿ ಮಸಾಜ್‌ ಮಾಡಿಸಿಕೊಳ್ಳುತ್ತಿರುವ ವೈರಲ್‌ ವಿಡಿಯೋಗಳ ವಿವಾದಕ್ಕೆ ಹೊಸ ತಿರುವು ದೊರಕಿದ್ದು, ಇವು ಫಿಸಿಯೋಥೆರಪಿ ಸೆಷನ್‌ಗಳು ಎಂಬ ಆಮ್ ಆದ್ಮಿ ಪಕ್ಷದ (ಎಎಪಿ) ಹೇಳಿಕೆಯನ್ನು ಅಲ್ಲಗಳೆಯುವಂತೆ, ವೀಡಿಯೋದಲ್ಲಿರುವ ಮಸಾಜ್‌ ಮಾಡುತ್ತಿರುವ ವ್ಯಕ್ತಿ ಅತ್ಯಾಚಾರ ಪ್ರಕರಣದಲ್ಲಿ ಕೈದಿಯಾಗಿದ್ದಾನೆ ಎಂದು ತಿಳಿದು ಬಂದಿದೆ. 

ತಿಹಾರ್ ಜೈಲಿನ ಅಧಿಕೃತ ಮೂಲಗಳ ಪ್ರಕಾರ, ವೀಡಿಯೋಗಳಲ್ಲಿ ಆಪ್ ಸಚಿವರಿಗೆ ಮಸಾಜ್ ಮಾಡುತ್ತಿರುವ ವ್ಯಕ್ತಿ ರಿಂಕು, ಲೈಂಗಿಕ ಅಪರಾಧಗಳಿಂದ ಮಕ್ಕಳ ಕಟ್ಟುನಿಟ್ಟಿನ ರಕ್ಷಣೆ (ಪೋಕ್ಸೊ) ಕಾನೂನಿನ ಅಡಿಯಲ್ಲಿ ಅತ್ಯಾಚಾರದ ಆರೋಪ ಹೊರಿಸಲಾದ ಕೈದಿಯಾಗಿದ್ದಾನೆ ಎಂದು ವರದಿಗಳು ತಿಳಿಸಿವೆ. ಕಳೆದ ವರ್ಷ 10 ನೇ ತರಗತಿ ವಿದ್ಯಾರ್ಥಿನಿಯಾಗಿರುವ ತನ್ನ ಸ್ವಂತ ಮಗಳ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಆತನನ್ನು ಬಂಧಿಸಲಾಗಿತ್ತು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಜೈನ್‌ಗೆ ತಿಹಾರ್ ಜೈಲಿನಲ್ಲಿ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದ ಕೆಲವೇ ದಿನಗಳಲ್ಲಿ ಈ ವಿಡಿಯೋಗಳು ಹೊರಬಿದ್ದಿವೆ. "ವಿಐಪಿ ಚಿಕಿತ್ಸೆ" ಆರೋಪವು ಡೈರೆಕ್ಟರ್ ಜನರಲ್ (ಜೈಲುಗಳು), ಸಂದೀಪ್ ಗೋಯೆಲ್ ಅವರನ್ನು ಹೊರತುಪಡಿಸಿ ಕನಿಷ್ಠ 12 ತಿಹಾರ್ ಜೈಲು ಅಧಿಕಾರಿಗಳನ್ನು ವರ್ಗಾಯಿಸಲು ಕಾರಣವಾಯಿತು.

Similar News