ಪರೇಶ ಮೇಸ್ತ ಸಾವಿನ ನಿಜವಾದ ಕಾರಣ ತಿಳಿಸಲು ನ.24ಕ್ಕೆ ಕಾಂಗ್ರೆಸ್‌ನಿಂದ ಕುಮಟದಲ್ಲಿ ಜನಜಾಗೃತಿ ಸಭೆ: ಐವನ್ ಡಿ’ಸೋಜಾ

Update: 2022-11-22 15:45 GMT

ಉಡುಪಿ, ನ.22: 2018ರ ವಿಧಾನಸಭಾ ಚುನಾವಣೆಗೆ ಮುನ್ನ ಕುಮಟದಲ್ಲಿ ನಡೆದ ಹೊನ್ನಾವರದ ಪರೇಶ್ ಮೇಸ್ತಾ ಸಾವಿನ ಪ್ರಕರಣದಲ್ಲಿ ಸಿಬಿಐ ತನಿಖೆಯ ವೇಳೆ ಹೊರಬಂದ ನೈಜ ಕಾರಣವನ್ನು ಉತ್ತರಕನ್ನಡ ಜಿಲ್ಲೆಯ ಜನತೆಗೆ ವಿವರಿಸಲು ಕಾಂಗ್ರೆಸ್ ಪಕ್ಷ ಇದೇ ನ.24ರಂದು ಬೆಳಗ್ಗೆ 11ಗಂಟೆಗೆ ಕುಮಟಾದಲ್ಲಿ ಬೃಹತ್  ಜನ ಜಾಗೃತಿ ಸಮಾವೇಶವನ್ನು ನಡೆಸಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪರೇಶ್ ಮೇಸ್ತಾ ಸಾವಿನ ಪ್ರಕರಣದಲ್ಲಿ ಬಿಜೆಪಿ ನಾಯಕರು ಹೆಣವನ್ನು ರಾಜಕೀಯವಾಗಿ ಬಳಸಿಕೊಂಡು ಜನರ ಭಾವನೆಗಳೊಂದಿಗೆ ಆಟವಾಡಿ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಲಾಭ ಪಡೆದಿದ್ದರು. ಇಂಥ ಬಿಜೆಪಿಗರ ನೈಜ ಬಣ್ಣವನ್ನು ಬಯಲು ಮಾಡುವ ಉದ್ದೇಶದಿಂದ ಈ ಜನಸಂಪರ್ಕ ಸಭೆಯನ್ನು ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದೆ ಎಂದರು.

ಸಮಾವೇಶದಲ್ಲಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೇಂದ್ರ ನಾಯಕ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ, ನಮ್ಮೆಲ್ಲಾ ಶಾಸಕರು, ಮಾಜಿ ಸಚಿವರು, ಜಿಲ್ಲಾಧ್ಯಕ್ಷರು ಭಾಗವಹಿಸುವರು ಎಂದವರು ತಿಳಿಸಿದರು.

ಸಭೆಯಲ್ಲಿ ಕರಾವಳಿಯ ಮೂರು ಜಿಲ್ಲೆಗಳಿಂದ 70ರಿಂದ 80 ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ. ಸಭೆಯಲ್ಲಿ ಬಿಜೆಪಿಯ ಜನವಿರೋಧಿ ನೀತಿಗಳ ವಿರುದ್ಧ ತೀವ್ರವಾದ ಧ್ವನಿಯನ್ನು ಎತ್ತುತ್ತೇವೆ. ಮುಂದೆ ಇಂಥ ಸಭೆಗಳನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ನಡೆಸಲಿದ್ದೇವೆ. ಅಲ್ಲದೇ ಹಳ್ಳಿಹಳ್ಳಿಗಳಲ್ಲಿ ಪಾದಯಾತ್ರೆಯ ಮೂಲಕ ಜನಜಾಗೃತಿ ಮನೆಮನೆ ಮುಟ್ಟಿಸುತ್ತೇವೆ ಎಂದರು.

ಸಿಬಿಐ ವರದಿಯಲ್ಲಿ ಸಹಜ ಸಾವು: 2017ರ ಡಿ.6ರಂದು ನಡೆದ ಪರೇಶ್ ಮೇಸ್ತಾ ಸಾವಿನ ಪ್ರಕರಣವನ್ನು ಬಿಜೆಪಿ ರಾಜಕೀಯ ಅಸ್ತ್ರವಾಗಿ ಬಳಸಿಕೊಂಡು ಸಿಬಿಐ ತನಿಖೆಗೆ ಒತ್ತಾಯಿಸಿದಾಗ ಸಿದ್ಧರಾಮಯ್ಯ ಸರಕಾರ ತಡ ಮಾಡದೇ ಸಿಬಿಐ ತನಿಖೆಗೆ ಒಪ್ಪಿಸಿತ್ತು. ಇದೀಗ ಸಿಬಿಐ ತನಿಖೆ ನಡೆಸಿ ಇದೊಂದು ಸಹಜ ಸಾವಾಗಿದ್ದು, ಕೊಲೆಯಲ್ಲ ಎಂದು ವರದಿ ನೀಡಿದೆ ಎಂದು ಐವನ್ ತಿಳಿಸಿದರು.

ಹೊನ್ನಾವರದ ಪರೇಶ ಮೇಸ್ತ ಸಾವಿನ ಪ್ರಕರಣವನ್ನು ಬಿಜೆಪಿ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡು ಅಧಿಕಾರದ ಸೂತ್ರ ಹಿಡಿಯಿತು. ಪರೇಶ ಮೇಸ್ತ ಸಾವಿನ ನಂತರ ಜಿಲ್ಲಾದ್ಯಂತ 67 ಪ್ರಕರಣಗಳು ದಾಖಲಾಗಿದ್ದು, ವಿವಿಧ ಕಲಂ ಅಡಿಯಲ್ಲಿ 2082 ಜನರ ವಿರುದ್ಧ ದೂರು ದಾಖಲಾಗಿತ್ತು. 361 ಜನರ ಬಂಧನವಾಯಿತು. 272 ಮಂದಿ ವಿರುದ್ಧ ರೌಡಿಶೀಟರ್ ತೆರೆಯಲಾಯಿತು. ಪೊಲೀಸರು ತನಿಖೆ ನಡೆಸಿ 1699 ಜನರ ವಿರುದ್ಧ ಕೋರ್ಟಿನಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು ಎಂದು ಐವನ್ ವಿವರಿಸಿದರು.

ಬಿಜೆಪಿಗರ ಸುಳ್ಳಿನ ಪ್ರಚಾರದಿಂದ ಅನೇಕ ಯುವಕರ ಕುಟುಂಬಗಳು ಬೀದಿ ಪಾಲಾಗಿವೆ. ಪ್ರಕರಣವನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಂಡ ಬಿಜೆಪಿ ಸಹಜ ಸಾವನ್ನು ಅನ್ಯಕೋಮಿನವರು ಹೊಡೆದು ಕೊಲೆ ಮಾಡಿದ್ದಾರೆ ಎಂದು ಬಿಂಬಿಸಿತು. ಇದು ರಾಜ್ಯಾದ್ಯಂತ ಕೋಮು ಸಂಘರ್ಷಕ್ಕೆ ಕಾರಣವೂ ಆಯಿತು. ಇದರ ಭರಪೂರ ಲಾಭ ಎತ್ತಿದ ಬಿಜೆಪಿ ಕರಾವಳಿ ಜಿಲ್ಲೆಗಳಲ್ಲಿ ಬಿಜೆಪಿ ಶಾಸಕರೇ ಆಯ್ಕೆಯಾಗುವಂತೆ ನೋಡಿಕೊಂಡಿತ್ತು ಎಂದರು.

ಹೀಗಾಗಿ ಬಿಜೆಪಿ ಶಾಸಕರು ಪರೇಶ ಮೇಸ್ತ ಸಾವಿನ ಫಲಾನುಭವಿಗಳು. ಸಿಬಿಐ ವರದಿ ಹಿನ್ನೆಲೆಯಲ್ಲಿ ಇವರೆಲ್ಲರೂ ತಕ್ಷಣವೇ ರಾಜೀನಾಮೆ ನೀಡಬೇಕಿತ್ತು ಎಂದು ಬಿಜೆಪಿ ಐದು ವರ್ಷಗಳಿಂದ ಪ್ರತಿಪಾದಿಸಿಕೊಂಡು ಬಂದಿದ್ದ ಸುಳ್ಳಿನ ಮುಖವಾಡ ಈಗ ಕಳಚಿ ಬಿದ್ದಿದೆ. ಆದುದರಿಂದ ಪರೇಶ ಮೇಸ್ತನ ಸಾವಿನ ನಿಜ ಸಂಗತಿ ಹಾಗೂ ಹಾಗೂ ಬಿಜೆಪಿಯ ಸುಳ್ಳನ್ನು ಜನರೆದುರು ತೆರೆದಿಡಲು ಕುಮಟಾದಲ್ಲಿ ಬೃಹತ್ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಂಡಿ ದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ವಕ್ತಾರ ಭಾಸ್ಕರ್ ರಾವ್ ಕಿದಿಯೂರು, ನಾಯಕರಾದ ಕುಶಲ ಶೆಟ್ಟಿ, ಅಣ್ಯಯ್ಯ ಶೇರಿಗಾರ್, ಕೀರ್ತಿ ಶೆಟ್ಟಿ, ಜಯಕುಮಾರ್ ಹಾಗೂ  ಇತರರು ಉಪಸ್ಥಿತರಿದ್ದರು.

Similar News