ಬಿಜೆಪಿ ನಾಯಕಿ ಸೋನಾಲಿ ಪೊಗಾಟ್ ಹತ್ಯೆಯಾಗಿದ್ದು ಏಕೆ ಗೊತ್ತೇ ?

Update: 2022-11-23 03:02 GMT

ಹೊಸದಿಲ್ಲಿ: ಮಾಜಿ ನಟಿ ಹಾಗೂ ಹರ್ಯಾಣದ ಬಿಜೆಪಿ ನಾಯಕಿ ಸೋನಾಲಿ ಪೊಗಾಟ್, ಗೋವಾದ ಹೋಟೆಲ್ ಕೊಠಡಿಯಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದ ಪ್ರಕರಣವನ್ನು ಕೊನೆಗೂ ಸಿಬಿಐ ಭೇದಿಸಿದೆ.

ಸೋನಾಲಿಯವರ ಆಪ್ತ ಸಹಾಯಕ ಹಾಗೂ ಅತನ ಸ್ನೇಹಿತರು, ಪೊಗಾಟ್ ಅವರ ಆಸ್ತಿ ಕಬಳಿಸುವ ಸಲುವಾಗಿ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ವಿವರಿಸಿದೆ. ಪೊಗಾಟ್ ಅವರ ಆಪ್ತಸಹಾಯಕ ಸುಧೀರ್ ಸಂಘವಾನ್ ಮತ್ತು ಸ್ನೇಹಿತರಾದ ಸುಖವೀಂದರ್‌ ನನ್ನು ಈ ಪ್ರಕರಣ ಸಂಬಂಧ ಬಂಧಿಸಲಾಗಿತ್ತು ಎಂದು timesofindia.com ವರದಿ ಮಾಡಿದೆ.

ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ 302 (ಹತ್ಯೆ), ಸೆಕ್ಷನ್ 34 (ಸಮಾನ ಉದ್ದೇಶ) ಮತ್ತು ಸೆಕ್ಷನ್ 36 ಅನ್ವಯ ಆರೋಪ ಹೊರಿಸಲಾಗಿದೆ. ಗೋವಾದ ಮಪೂಸಾ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್‍ಗೆ ಈ ಸಂಬಂಧ 1000 ಪುಟಗಳ ಆರೋಪಪಟ್ಟಿ ಸಲ್ಲಿಸಲಾಗಿದೆ. ಪೊಗಾಟ್ ಅವರ ಸಾವಿಗಿಂತ ಕೆಲ ಗಂಟೆಗಳ ಮೊದಲು ಕೂಡಾ ಎಂಡಿಎಂಎ ಡ್ರಗ್ಸ್ ಸೇವಿಸಲು ಆರೋಪಿಗಳು ಬಲವಂತಪಡಿಸಿದ್ದರು ಎಂದು ವಿವರಿಸಲಾಗಿದೆ.

ಸಾಕ್ಷಿಗಳ ಹೇಳಿಕೆಗಳ ಜತೆಗೆ, ಸಿಬಿಐ ದೆಹಲಿ ತಂಡದ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಯನ್ನೂ ಸಲ್ಲಿಸಿದ್ದಾರೆ. ಅಂಜುನಾ ಬೀಚ್ ಪ್ರದೇಶದ ಜನಪ್ರಿಯ ಶಕ್ ಕರ್ಲೀಸ್ ಬೀಚ್‍ನಲ್ಲಿ ಸಂಘವಾನ್, ಪೊಗಾಟ್ ಅವರ ಗಂಟಲಿಗೆ ಮದ್ಯ ಸುರಿಯುತ್ತಿರುವ ದೃಶ್ಯ ದಾಖಲಾಗಿದೆ. ಈ ಮದ್ಯಪಾನದ ಬಳಿಕ ಅಸ್ವಸ್ಥಗೊಂಡ ನಾಯಕಿ, ಸ್ವಂತವಾಗಿ ನಡೆದುಕೊಂಡು ಹೋಗಲೂ ಶಕ್ತರಿರಲಿಲ್ಲ ಎನ್ನುವುದು ದೃಶ್ಯಾವಳಿಯಲ್ಲಿ ಕಂಡುಬರುತ್ತದೆ.

ಮದ್ಯದಲ್ಲಿ ಎಂಡಿಎಂಎ ಡ್ರಗ್ಸ್ ಸೇರಿಸಿ ಪೊಗಾಟ್‍ಗೆ ನೀಡಲಾಗಿದ್ದು, ಇದರಿಂದಾಗಿ ಅವರು ಎರಡು ಗಂಟೆ ಕಾಲ ಕ್ಲಬ್ ಶೌಚಾಲಯದಲ್ಲೇ ಇರಬೇಕಾಯಿತು. ಅಲ್ಲಿ ನಿರಂತರವಾಗಿ ವಾಂತಿ ಮಾಡಿಕೊಳ್ಳಲಾರಂಭಿಸಿದರು. ಮುಂಜಾನೆ 4.30ರ ಸುಮಾರಿಗೆ ಕ್ಲಬ್‍ನಿಂದ ಆಕೆಯನ್ನು ಕರೆತರುತ್ತಿರುವುದು ಕಂಡುಬಂದಿದೆ.

ಅಲ್ಲಿಂದ ಪೊಗಾಟ್ ಅವರನ್ನು ಗ್ರಾಂಡ್ ಲಿನೋಯ್ ರೆಸಾರ್ಟ್‍ಗೆ ಹಾಗೂ ಬಳಿಕ ಸಂತ ಅಂತೋನಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆಗೆ ಸಾಗಿಸುವಾಗಲೇ ಅವರು ಮೃತಪಟ್ಟಿದ್ದರು ಎಂದು ಅರೋಪಪಟ್ಟಿಯಲ್ಲಿ ವಿವರಿಸಲಾಗಿದೆ. ಡಿಸೆಂಬರ್ 5ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ ಎಂದು timesofindia.com ವರದಿ ಮಾಡಿದೆ.

Similar News