×
Ad

ಗುಜರಾತ್ ಚುನಾವಣೆ: ಇನ್ನೂ 12 ಬಂಡಾಯ ನಾಯಕರನ್ನು ಅಮಾನತುಗೊಳಿಸಿದ ಬಿಜೆಪಿ

Update: 2022-11-23 10:21 IST

ಅಹಮದಾಬಾದ್: ಹಿಮಾಚಲ ಪ್ರದೇಶದಲ್ಲಿ ಹೆಚ್ಚು ಬಂಡಾಯದ ಬಿಸಿ ಎದುರಿಸಿದ್ದ ಬಿಜೆಪಿ ಇದೀಗ ತನ್ನ 27 ವರ್ಷಗಳ ಭದ್ರಕೋಟೆ ಗುಜರಾತ್‌ನಲ್ಲಿ ಇದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದೆ.  ಗುಜರಾತ್ ನಲ್ಲಿ ಬಂಡಾಯ ಎದ್ದಿರುವ  ನಾಯಕರನ್ನು ಸಾಮೂಹಿಕವಾಗಿ ಅಮಾನತುಗೊಳಿಸಿದೆ.

ಪಕ್ಷದ ಟಿಕೆಟ್ ನಿರಾಕರಿಸಿದ ನಂತರ ಮುಂಬರುವ ವಿಧಾನಸಭಾ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಕ್ಕಾಗಿ ಆರು ಬಾರಿ ಶಾಸಕರಾದವರು ಹಾಗೂ ಇಬ್ಬರು ಮಾಜಿ ಶಾಸಕರು ಸೇರಿದಂತೆ ಇನ್ನೂ 12 ಮಂದಿಯನ್ನು ಮಂಗಳವಾರ ಅಮಾನತುಗೊಳಿಸಿದೆ.

ಅಮಾನತುಗೊಳಿಸಿದವರ ಸಂಖ್ಯೆ ಈಗ 19ಕ್ಕೆ ಏರಿಕೆಯಾಗಿದೆ. ಆರು ವರ್ಷಗಳ ಕಾಲ ಅಮಾನತು ಆಗಿದ್ದು, ಈ ಅವಧಿಯಲ್ಲಿ ಅವರು ಪಕ್ಷದ ಸದಸ್ಯರಾಗಿ ಉಳಿಯುವಂತಿಲ್ಲ.

ಡಿಸೆಂಬರ್ 1 ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಿದ ನಂತರ ಏಳು ನಾಯಕರನ್ನು ಈ ಹಿಂದೆ ಅಮಾನತುಗೊಳಿಸಲಾಗಿತ್ತು. ಈಗ ಅಮಾನತುಗೊಂಡಿರುವ 12 ಮಂದಿ ಡಿಸೆಂಬರ್ 5 ರಂದು ನಡೆಯುವ ಎರಡನೇ ಹಂತದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ಎರಡನೇ ಹಂತಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕದ ಒಂದು ದಿನದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಮನವೊಲಿಕೆ ಪ್ರಯತ್ನದ ಹೊರತಾಗಿಯೂ ಈ ಬಿಜೆಪಿ ಬಂಡಾಯ ಅಭ್ಯರ್ಥಿಗಳು ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿಯಲಿಲ್ಲ.

Similar News