ಪಣಿಯಾಡಿ ಪ್ರಶಸ್ತಿಗೆ ತುಳು ಕಾದಂಬರಿಗಳ ಹಸ್ತಪ್ರತಿ ಆಹ್ವಾನ

Update: 2022-11-23 13:45 GMT

ಉಡುಪಿ, ನ.23: ಉಡುಪಿ ತುಳುಕೂಟದ ವತಿಯಿಂದ ನಡೆಯುವ ಎಸ್. ಯು. ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಯ ಆಯ್ಕೆಗಾಗಿ ತುಳು ಕಾದಂಬರಿ ಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ.

ತುಳು ಭಾಷೆಯಲ್ಲಿ ಉತ್ತಮ ಕಾದಂಬರಿಗಳು ಪ್ರಕಟಗೊಳ್ಳಬೇಕು ಎಂಬ ಆಶಯದಿಂದ ತುಳು ಚಳವಳಿಯ ಪ್ರವರ್ತಕ ದಿ. ಎಸ್.ಯು. ಪಣಿಯಾಡಿ  ನೆನಪಿನಲ್ಲಿ ನೀಡುವ ಈ ಪ್ರಶಸ್ತಿಗೆ ಕೆಳಗಿನ ನಿಬಂಧನೆಗೊಳಪಟ್ಟು ಹಸ್ತಪ್ರತಿಗಳನ್ನು ಸ್ವೀಕರಿಸಲಾಗುವುದು.

ಹಸ್ತಪ್ರತಿಗಳು ತುಳು ಕಾದಂಬರಿಗಳಾಗಿರಬೇಕು. ಅದು ಈವರೆಗೆ ಯಾವುದೇ ಬಹುಮಾನಕ್ಕೆ ಆಯ್ಕೆಯಾಗಿರ ಬಾರದು. ಇದುವರೆಗೆ ಎಲ್ಲೂ ಮುದ್ರಿತವಾಗಿರ ಬಾರದು. ಆಯ್ಕೆಯಾದರೆ ಮುದ್ರಿಸುವಾಗ ಕ್ರೌನ್ 1/8 ಆಕಾರದಲ್ಲಿ 120 ಪುಟಗಳಿಗಿಂತ ದೀರ್ಘವಾಗಿರಬೇಕು. ಹಸ್ತಪ್ರತಿಗಳು ಸುಂದರವಾದ ಕೈಬರಹ, ಬೆರಳಚ್ಚು ಅಥವಾ ಕಂಪ್ಯೂಟರ್ ಮುದ್ರಿತ (ಡಿಟಿಪಿ) ರೂಪದಲ್ಲಿರಬಹುದು. 

ಕಾದಂಬರಿಯು ತುಳುನಾಡಿನ ಭೌಗೋಳಿಕ ಚಿತ್ರಣ, ತುಳು ಸಂಸ್ಕೃತಿಯನ್ನು ಬಿಂಬಿಸುವ ಅಂಶಗಳಿಂದ ಕೂಡಿದ್ದು, ಪೌರಾಣಿಕ, ಐತಿಹಾಸಿಕ, ಜಾನಪದ, ಸಾಮಾಜಿಕ ವಸ್ತುವನ್ನು ಆಧರಿಸಿರಬಹುದು. ಪ್ರಶಸ್ತಿ 8 ಸಾವಿರ ರೂ. ಮೊತ್ತ ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿದೆ. 

ಹಸ್ತಪ್ರತಿಯನ್ನು ಡಿಸೆಂಬರ್ 20ರೊಳಗೆ  ಪಣಿಯಾಡಿ ತುಳು ಕಾದಂಬರಿ ಸ್ಪರ್ಧೆಯ ಸಂಚಾಲಕಿ - ಶಿಲ್ಪಾ ಜೋಶಿ , ಶೆಲ್ಟರ್ ಹೆಚ್‌ಐಜಿ 19, ಪ್ರಸನ್ನ ಗಣಪತಿ ದೇವಸ್ಥಾನದ ಎದುರು, ಮಣ್ಣುಪಳ್ಳ, ಮಣಿಪಾಲ, ಉಡುಪಿ- 576 104 (ಮೊಬೈಲ್- 7892194150) ಇಲ್ಲಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು ( 9844532629) ಇವರನ್ನು ಸಂಪರ್ಕಿಸಬಹುದು ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.

Similar News