ಡಿ.9ರಿಂದ 12: ಮಾಹೆಯಿಂದ ‘ಅಡ್ವೆಂಚರ್ ರೇಸಿಂಗ್’

Update: 2022-11-23 15:50 GMT

ಮಣಿಪಾಲ, ನ.23: ಮಾಹೆ ವಿವಿ, ಬೆಂಗಳೂರಿನ ಎನ್‌ಥ್ ಅಡ್ವೆಂಚರ್ಸ್‌ನ ಸಹಯೋಗದೊಂದಿಗೆ ಜಗತ್ತಿನ ಅತ್ಯಂತ ಕಠಿಣ ತಂಡ ಸ್ಪರ್ಧೆಯಾದ ಅಡ್ವೆಂಚರ್ ರೇಸಿಂಗ್‌ನ್ನು (ಸಾಹಸ ಸ್ಪರ್ಧೆ) ಉಡುಪಿಯ ಜನತೆಗೆ ಪರಿಚಯಿಸಲಿದೆ. ಈ ಸ್ಪರ್ಧೆ ಮುಂದಿನ ಡಿ.9ರಿಂದ 11ರವರೆಗೆ ಜಿಲ್ಲೆಯಲ್ಲಿ ನಡೆಯಲಿದೆ ಎಂದು ಮಾಹೆಯ ಪ್ರಕಟಣೆ ತಿಳಿಸಿದೆ.

ತಲಾ ನಾಲ್ವರು ಸದಸ್ಯರ ತಂಡಗಳು ಬಹುವಿಧ ಕ್ರೀಡೆಗಳಾದ ಕಯಾಕಿಂಗ್,  ಹೈಕಿಂಗ್, ಟ್ರೈಲ್ ರನ್ನಿಂಗ್, ಮೌಂಟೆನ್ ಬೈಕಿಂಗ್‌ನಲ್ಲಿ ಸ್ಪರ್ಧಿಸಬೇಕಿದೆ. ಅಡ್ವೆಂಚರ್ ರೇಸಿಂಗ್ ಎಂಬುದು ತಂಡ ಸ್ಪರ್ಧೆಯಾಗಿದ್ದು, ಇದರಲ್ಲಿ ತಂಡ ಸ್ಪೂರ್ತಿ, ಯೋಜನೆ, ಸಂವಹನ ಸ್ಕಿಲ್, ಸಮಸ್ಯೆಗೆ ಪರಿಹಾರ, ತ್ವರಿತ ನಿರ್ಧಾರ, ಸಮಯದ ನಿರ್ವಹಣೆ ಹಾಗೂ ಕೌಶಲ್ಯ ದ ಪರೀಕ್ಷೆ ನಡೆಯುತ್ತದೆ.

ಅಡ್ವೆಂಚರ್ ರೇಸಿಂಗ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಕ್ರೀಡೆ ಯಾಗಿದ್ದು, 1968ರಿಂದ ನಡೆಯುತ್ತಿದೆ. ವಾರ್ಷಿಕ ಎಆರ್ ವಿಶ್ವ ಚಾಂಪಿಯನ್ ಷಿಪ್ ಎಂಬುದು 500ಕಿ.ಮೀ. ವ್ಯಾಪ್ತಿಯಲ್ಲಿ 7ರಿಂದ 10ದಿನಗಳ ಕಾಲ ನಡೆಯುತಿದ್ದು, ವಿಶ್ವದ ಎಲ್ಲಾ ಪ್ರಮುಖ ತಂಡಗಳು ಪ್ರತಿಷ್ಠಿತ ಪ್ರಶಸ್ತಿಗಾಗಿ ಸೆಣಸುತ್ತವೆ.

ಕ್ರೀಡೆ ಎಂಬುದು ಶಿಕ್ಷಣದ ಅವಿಭಾಜ್ಯ ಅಂಗವಾಗಿದ್ದು, ಮಾಹೆ ಇದನ್ನು  ತನ್ನ ನೀತಿಯಲ್ಲಿ ಅಳವಡಿಸಿಕೊಂಡಿದೆ. ಇದೀಗ ಎನ್‌ಥ್ ಅಡ್ವೆಂಚರ್ ಸಂಸ್ಥೆಯ ಸಹಯೋಗದೊಂದಿಗೆ ಅಡ್ವೆಂಚರ್ ರೇಸಿಂಗ್‌ನ್ನು ಜಿಲ್ಲೆಗೆ ಪರಿಚಯಿಸಲು ಮುಂದಾಗಿದೆ. ಇದು ವಿಶ್ವದ ಅತ್ಯಂತ ಕಠಿಣ ತಂಡ ಸ್ಪರ್ಧೆಯಾಗಿದ್ದು, ಇದರ ಭಾಗವಾಗಲು ನಮಗೆ ಸಂತೋಷವಿದೆ ಎಂದು ಮಾಹೆಯ ಕುಲಪತಿ ಲೆ.ಜ. (ಡಾ.)ಎಂ.ಡಿ.ವೆಂಕಟೇಶ ತಿಳಿಸಿದ್ದಾರೆ.

ಈ ಬಾರಿಯ ರೇಸ್ ಎರಡು ವಿಭಾಗಗಳಲ್ಲಿ ನಡೆಯಲಿದೆ. ನಮ್ಮ ಅಡ್ವೆಂಚರ್ ರೇಸ್ 2.0 ಏಷ್ಯನ್ ದೇಶಗಳ ಸ್ಪರ್ಧಿಗಳಿಗಾಗಿ ನಡೆಯಲಿದ್ದು, ಅಡ್ವೆಂಚರ್ ರೇಸಿಂಗ್ ವಿಶ್ವ ಸರಣಿಯ ಅಂಗವಾಗಿ ನಡೆಯಲಿದೆ. ಇದರಲ್ಲಿ ನಾಲ್ವರು ಸದಸ್ಯರ ತಂಡ 120 ಕಿ.ಮೀ.ನ ಬಹುವಿಧದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ.

ಇನ್ನೊಂದು ಮಾಹೆ ಅಡ್ವೆಂಚರ್ ರೇಸ್ 30ಕಿ.ಮೀ. ತಂಡ ಸ್ಪರ್ಧೆಯಾಗಿದ್ದು, ತಂಡದಲ್ಲಿ ಇಬ್ಬರು ಸ್ಪರ್ಧಿಗಳಿರುತ್ತಾರೆ ಎಂದು ಮಾಹೆ ಪ್ರಕಟಣೆ ತಿಳಿಸಿದೆ.  

Similar News