ಫಿಫಾ ವಿರುದ್ಧ ಜರ್ಮನಿ ಆಟಗಾರರ ಸಾಂಕೇತಿಕ ಪ್ರತಿಭಟನೆ : ಕಾರಣವೇನು ಗೋತ್ತೇ ?

Update: 2022-11-23 18:03 GMT

ದೋಹಾ, ನ. 23: ಆಟದ ವೇಳೆ ‘ವನ್‌ಲವ್’ ('One Love') ತೋಳುಪಟ್ಟಿಯನ್ನು ಧರಿಸುವುದನ್ನು ನಿಷೇಧಿಸುವ ಜಾಗತಿಕ ಫುಟ್ಬಾಲ್ ಆಡಳಿತ ಮಂಡಳಿ ಫಿಫಾದ ನಿರ್ಧಾರವನ್ನು ಜರ್ಮನಿ ಆಟಗಾರರು ಬುಧವಾರ ಸಾಂಕೇತಿಕವಾಗಿ ಪ್ರತಿಭಟಿಸಿದ್ದಾರೆ. ಜಪಾನ್ ವಿರುದ್ಧದ ಪಂದ್ಯಕ್ಕೆ ಮೊದಲು ನಡೆದ ಗುಂಪು ಫೋಟೊ ಕಾರ್ಯಕ್ರಮದಲ್ಲಿ ಜರ್ಮನಿ ಆಟಗಾರರು ತಮ್ಮ ಕೈಗಳನ್ನು ಬಾಯಿಯ ಮೇಲೆ ಇಟ್ಟುಕೊಳ್ಳುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.


ದೋಹಾ ಸಮೀಪದ ಅಲ್-ರಯ್ಯನ್ ಖಲೀಫ ಇಂಟರ್‌ನ್ಯಾಶನಲ್ ಸ್ಟೇಡಿಯಮ್‌(Al-Rayyan Khalifa International Stadium)ನಲ್ಲಿ ನಡೆದ ಜಪಾನ್ ವಿರುದ್ಧದ ಇ ಗುಂಪಿನ ಪಂದ್ಯಕ್ಕೆ ಮೊದಲು ಮೈದಾನದಲ್ಲಿ ಡಝನ್‌ಗಟ್ಟಳೆ ಛಾಯಾಗ್ರಾಹಕರ ಸಮ್ಮುಖದಲ್ಲಿ ಜರ್ಮನಿಯ ಎಲ್ಲಾ ಆಟಗಾರರು ತಮ್ಮ ಪ್ರತಿಭಟನೆಯನ್ನು ದಾಖಲಿಸಿದರು.


ಎಲ್‌ಜಿಬಿಟಿಕ್ಯೂ (ಸಲಿಂಗಿಗಳು, ಉಭಯಲಿಂಗಿಗಳು ಮತ್ತು ತೃತೀಯ ಲಿಂಗಿಗಳು) ಸಮುದಾಯಕ್ಕೆ ಬೆಂಬಲ ಸೂಚಿಸಿ ಆಟದ ವೇಳೆ ‘ವನ್ ಲವ್’ ತೋಳುಪಟ್ಟಿಯನ್ನು ಧರಿಸಲು ಯುರೋಪಿಯನ್ ಫುಟ್ಬಾಲ್ ತಂಡಗಳು ನಿರ್ಧರಿಸಿದ್ದವು. ಖತರ್‌ನಲ್ಲಿ ಸಲಿಂಗಿ ಸಂಬಂಧ ಅಪರಾಧವಾಗಿದೆ.
ಆದರೆ, ವೈವಿಧ್ಯತೆ ಮತ್ತು ಸಹಿಷ್ಣುತೆಯನ್ನು ಪ್ರತಿನಿಧಿಸುವ ಇಂಥ ತೊಳುಪಟ್ಟಿಯನ್ನು ಆಡುವಾಗ ಧರಿಸಿದರೆ ಶಿಸ್ತು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಫಿಫಾ ಏಳು ಯುರೋಪಿಯನ್ ತಂಡಗಳಿಗೆ ಎಚ್ಚರಿಕೆ ನೀಡಿದೆ.


ಅದೇ ವೇಳೆ, ಜರ್ಮನಿಯ ಆಂತರಿಕ ಸಚಿವೆ ನ್ಯಾನ್ಸಿ ಫೇಸರ್ ‘ವನ್‌ಲವ್’ ತೋಳುಪಟ್ಟಿಯನ್ನು ಧರಿಸಿ ಫಿಫಾ ಅಧ್ಯಕ್ಷ ಗಿಯಾನಿ ಇನ್‌ಫ್ಯಾಂಟಿನೊ(Gianni Infantino) ಅವರ ಪಕ್ಕದಲ್ಲಿ ಕುಳಿತಿದ್ದರು. ಇದಕ್ಕೂ ಮೊದಲು, ಶಿಸ್ತು ಕ್ರಮವನ್ನು ತೆಗೆದುಕೊಳ್ಳುವ ಬೆದರಿಕೆಯನ್ನು ಹಾಕಿರುವುದಕ್ಕಾಗಿ ಫೇಸರ್ ಫಿಫಾವನ್ನು ಟೀಕಿಸಿದ್ದರು. ‘‘ಶಿಸ್ತು ಕ್ರಮದ ಬೆದರಿಕೆಯು ತಪ್ಪು ಕ್ರಮವಾಗಿದೆ ಹಾಗೂ ಸ್ವೀಕಾರಾರ್ಹ ವರ್ತನೆಯಲ್ಲ’’ ಎಂದು ಅವರು ಹೇಳಿದ್ದಾರೆ.

Similar News