ಬ್ರಿಟನ್: ಪ್ರಧಾನಿ ರಿಷಿ ಸುನಕ್ ರ ಮಹಾತ್ವಾಕಾಂಕ್ಷೆಯ ಯೋಜನೆಗೆ ಪಕ್ಷದ ಸಂಸದರ ವಿರೋಧ

Update: 2022-11-23 18:00 GMT

ಲಂಡನ್, ನ.23:  ಬ್ರಿಟನ್ ಪ್ರಧಾನಿ ರಿಷಿ ಸುನಕ್ (Rishi Sunak)ಅವರ ಮಹಾತ್ವಾಕಾಂಕ್ಷೆಯ ವಸತಿ ಸುಧಾರಣಾ ಮಸೂದೆಗೆ ಸ್ವಪಕ್ಷದ ಹಲವು ಸಂಸದರು ವಿರೋಧ ಸೂಚಿಸಿದ ಹಿನ್ನೆಲೆಯಲ್ಲಿ ಮಸೂದೆ ಮಂಡನೆಯಲ್ಲಿ ವಿಳಂಬ ತಂತ್ರ ಅನುಸರಿಸಲು ಸುನಕ್ ಮುಂದಾಗಿದ್ದಾರೆ ಎಂದು  ವರದಿಯಾಗಿದೆ.

ಕಡಿಮೆ ವೆಚ್ಚದಲ್ಲಿ ಪ್ರತೀ ವರ್ಷ 3 ಲಕ್ಷ ಮನೆಗಳನ್ನು ಕಡ್ಡಾಯವಾಗಿ ನಿರ್ಮಿಸಬೇಕು ಎಂಬ ಗುರಿ ಹೊಂದಿರುವ ಮಸೂದೆಗೆ ಬ್ರಿಟನ್ನ ಆಡಳಿತಾರೂಢ ಕನ್ಸರ್ವೇಟಿವ್(Conservative) ಪಕ್ಷದ 40ಕ್ಕೂ ಅಧಿಕ ಸಂಸದರು ವಿರೋಧ ವ್ಯಕ್ತಪಡಿಸಿದ್ದಾರೆ. ಮಸೂದೆಯಲ್ಲಿ, ಕಡ್ಡಾಯ ಎಂಬ ಪದದ ಬದಲು, ಸಲಹೆ ನೀಡಲಾಗಿದೆ ಎಂಬ ವಾಕ್ಯವನ್ನು ಸೇರಿಸಬೇಕು ಎಂದು ಮಾಜಿ ಸಚಿವೆ ಥೆರೆಸಾ ವಿಲಿಯರ್ಸ್ ನೇತೃತ್ವದ ಬಂಡಾಯ ಸಂಸದರು ಆಗ್ರಹಿಸುತ್ತಿದ್ದಾರೆ. ಸುನಕ್ ಅವರಿಗೆ 69 ಸಂಸದರ ಬೆಂಬಲವಿದ್ದರೂ, ಒಂದು ವೇಳೆ ಬಂಡಾಯ ಸಂಸದರು ಲೇಬರ್ ಪಕ್ಷ ಸೇರಿದಂತೆ ವಿಪಕ್ಷಗಳ ಪರ ಮತ ಚಲಾಯಿಸಿದರೆ ಮಸೂದೆಗೆ ಸೋಲಾಗಲಿದೆ.

ಈ ಹಿನ್ನೆಲೆಯಲ್ಲಿ ಮಸೂದೆ ಮಂಡನೆಯನ್ನು ವಿಳಂಬಿಸಿ, ಬಂಡಾಯ ಸಂಸದರ ಮನ ಒಲಿಸಲು ಸರಕಾರ ಮುಂದಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. 

Similar News