ಅರುಣ್ ಗೋಯೆಲ್ ರನ್ನು ಚುನಾವಣಾ ಆಯುಕ್ತರನ್ನಾಗಿ ತರಾತುರಿಯಲ್ಲಿ ನೇಮಕ ಮಾಡುವ ಅಗತ್ಯವೇನಿತ್ತು : ಸುಪ್ರೀಂಕೋರ್ಟ್

Update: 2022-11-24 08:41 GMT

ಹೊಸದಿಲ್ಲಿ: ಮಾಜಿ ಐಎಎಸ್ ಅಧಿಕಾರಿ ಅರುಣ್ ಗೋಯೆಲ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ ತರಾತುರಿಯಲ್ಲಿ ನೇಮಕ ಮಾಡುವ ಅಗತ್ಯವೇನಿತ್ತು  ಎಂದು ಸುಪ್ರೀಂ ಕೋರ್ಟ್ Supreme Court ಇಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿದೆ.

ದಯವಿಟ್ಟು ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಎಂದು ಅಟಾರ್ನಿ ಜನರಲ್ ಆರ್. ವೆಂಕಟರಮಣಿ  ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.  ನಾವು  ಈ ವಿಷಯವನ್ನು ಸಮಗ್ರವಾಗಿ ಪರಿಶೀಲಿಸುತ್ತೇವೆ  ಎಂದು  ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಐವರು ನ್ಯಾಯಾಧೀಶರ ಸಂವಿಧಾನ ಪೀಠ  ಸತತ ಮೂರನೇ ದಿನವೂ ಚುನಾವಣಾ ಆಯುಕ್ತರು ಹಾಗೂ  ಮುಖ್ಯ ಚುನಾವಣಾ ಆಯುಕ್ತರನ್ನು ನೇಮಿಸುವ ವ್ಯವಸ್ಥೆಯ ಕುರಿತು ಕೇಂದ್ರ ಸರಕಾರವನ್ನು  ಪ್ರಶ್ನಿಸಿತು. ಇಂದು ನೇರವಾಗಿ ಅರುಣ್ ಗೋಯೆಲ್‌ಗೆ ಸಂಬಂಧಿಸಿದ ಫೈಲ್‌ಗಳತ್ತ ಗಮನ ಹರಿಸಿದೆ.

"ಶಾರ್ಟ್‌ಲಿಸ್ಟ್ ಮಾಡಲಾದ ನಾಲ್ಕು ಹೆಸರುಗಳ ಪಟ್ಟಿಯಿಂದ ಕಾನೂನು ಸಚಿವರು ಹೆಸರುಗಳನ್ನು ಆಯ್ಕೆ ಮಾಡುತ್ತಾರೆ... ಫೈಲ್ ಅನ್ನು ನವೆಂಬರ್ 18 ರಂದು ಇಡಲಾಗಿದೆ. ಅದೇ ದಿನ ಕಡತ ವಿಲೇವಾರಿಯಾಗುತ್ತದೆ. ಪ್ರಧಾನಿ ಕೂಡ ಅದೇ ದಿನ ಹೆಸರನ್ನು ಶಿಫಾರಸು ಮಾಡುತ್ತಾರೆ.  ನಾವು  ಯಾವುದೇ ಸಂಘರ್ಷ ಬಯಸುವುದಿಲ್ಲ. ಆದರೆ ಇದನ್ನು ತರಾತುರಿಯಲ್ಲಿ ಮಾಡಲಾಗಿದೆಯೇ? ಇಷ್ಟೊಂದು ಆತುರದ ಅಗತ್ಯವೇನಿತ್ತು? ಎಂದು ನ್ಯಾಯಾಲಯ ಬೆಟ್ಟು ಮಾಡಿದೆ.

 ಈ ಪ್ರಕ್ರಿಯೆಯು "ಒಂದೇ ದಿನದಲ್ಲಿ ಆರಂಭವಾಯಿತು ಹಾಗೂ  ಪೂರ್ಣಗೊಂಡಿತು.  ಇಲ್ಲಿ ಯಾವ ರೀತಿಯ ಮೌಲ್ಯಮಾಪನವನ್ನು ಮಾಡಲಾಗಿದೆ ... ಆದರೂ, ನಾವು ಅರುಣ್ ಗೋಯೆಲ್ ಯೋಗ್ಯತೆ,  ಅರ್ಹತೆಯನ್ನು ಪ್ರಶ್ನಿಸುತ್ತಿಲ್ಲ.  ಆದರೆ ಪ್ರಕ್ರಿಯೆಯನ್ನು ಪ್ರಶ್ನಿಸುತ್ತಿದ್ದೇವೆ ಎಂದು ನ್ಯಾಯಾಲಯ ಹೇಳಿದೆ.

ಅರುಣ್ ಗೋಯೆಲ್ ಅವರನ್ನು ಇತ್ತೀಚೆಗೆ ಸ್ವಯಂ ನಿವೃತ್ತಿ ಪಡೆದ  ತಕ್ಷಣವೇ ಚುನಾವಣಾ ಸಂಸ್ಥೆಗೆ ನೇಮಕ ಮಾಡಲಾಗಿದ್ದು, ಅವರ ನೇಮಕಾತಿಯಲ್ಲಿ ಯಾವುದೇ ಕಾನೂನುಬದ್ಧವಾಗಿ ಸಂಶಯಾಸ್ಪದ ನಡವಳಿಕೆ ಇದೆಯೇ ಎಂದು ತಿಳಿಯಲು ಬಯಸುವುದಾಗಿ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ನೇತೃತ್ವದ ಪೀಠ ಹೇಳಿದೆ.

ಚುನಾವಣಾ ಆಯೋಗದ ನೇಮಕಾತಿಗಳಿಗೆ ಕೊಲಿಜಿಯಂ ಮಾದರಿಯ ವ್ಯವಸ್ಥೆಯನ್ನುಜಾರಿಗೆ ತರುವಂತೆ  ಕೋರಿ ಸಲ್ಲಿಸಲಾದ ಮನವಿಗಳ ಗುಚ್ಚದ ಕುರಿತು ವಿಚಾರಣೆಯನ್ನು ಸುಪ್ರೀಂಕೋರ್ಟ್  ಇಂದು ಮುಕ್ತಾಯಗೊಳಿಸಿದ್ದು, ತನ್ನ ಆದೇಶವನ್ನು ಕಾಯ್ದಿರಿಸಿದೆ.

Similar News