ಕೈದಿಗಳ ವಿನಿಮಯ: ರಶ್ಯ- ಉಕ್ರೇನ್ ಚರ್ಚೆ

Update: 2022-11-24 17:50 GMT

ರಿಯಾದ್, ನ.24: ಯುದ್ಧ ಕೈದಿಗಳ ವಿನಿಮಯದ ಬಗ್ಗೆ ರಶ್ಯ(Russia) ಮತ್ತು ಉಕ್ರೇನ್‍(Ukraine)ನ ಪ್ರತಿನಿಧಿಗಳು ಇತ್ತೀಚೆಗೆ  ಯುಎಇ(UAE)ಯಲ್ಲಿ ಸಭೆ ನಡೆಸಿ ಚರ್ಚಿಸಿದ್ದಾರೆ. ಯುಎಇ ಮಧ್ಯಸ್ಥಿಕೆಯಲ್ಲಿ ಸಭೆ ನಡೆದಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಉಕ್ರೇನ್‍ನ ಪೈಪ್‍ಲೈನ್ ಮೂಲಕ   ಏಷ್ಯಾ ಮತ್ತು ಆಫ್ರಿಕಾಕ್ಕೆ ಹೋಗುವ ರಶ್ಯದ ಅಮೋನಿಯಾ ರಫ್ತನ್ನು ಪುನರಾರಂಭಿಸಲು ಅವಕಾಶ ನೀಡುವ ಮೂಲಕ  ಉಭಯ ದೇಶಗಳು ಪರಸ್ಪರ ಯುದ್ಧಕೈದಿಗಳನ್ನು ವಿನಿಮಯ ಮಾಡಿಕೊಳ್ಳಲು ಪೂರಕ ವಾತಾ ವರಣ ನಿರ್ಮಿಸುವುದು ಚರ್ಚೆಯ ಪ್ರಮುಖ ಗುರಿಯಾಗಿತ್ತು. ಸಭೆಗೆ ವಿಶ್ವಸಂಸ್ಥೆಯ ಪ್ರತಿನಿಧಿಗಳಿಗೆ ಆಹ್ವಾನ ಇರಲಿಲ್ಲ ಎಂದು ಮೂಲಗಳು ಹೇಳಿವೆ. ಅಮೋನಿಯಾವನ್ನು ಗೊಬ್ಬರ ತಯಾರಿಸಲು ಬಳಸಲಾಗುತ್ತದೆ.

ನಮ್ಮ ಯುದ್ಧಕೈದಿಗಳ ಬಿಡುಗಡೆ ರಶ್ಯದ ಅಮೋನಿಯಾ ರಫ್ತು ಪುನರಾರಂಭ ಪ್ರಕ್ರಿಯೆಯ ಒಂದು ಭಾಗವಾಗಿದೆ. ಯದ್ಧಕೈದಿಗಳ ವಿನಿಮಯಕ್ಕೆ ಯಾವುದೇ ಅವಕಾಶ ದೊರೆತರೂ ನಾವು ಅದನ್ನು ಪರಿಶೀಲಿಸುತ್ತೇವೆ ಎಂದು ಟರ್ಕಿಗೆ ಉಕ್ರೇನ್‍ನ ರಾಯಭಾರಿ ವೆಸಿಲ್ ಬೋಡ್ನರ್ ಹೇಳಿದ್ದಾರೆ.

ಯುರೋಪ್‍ನ ಬಂದರುಗಳಲ್ಲಿ ಸಿಲುಕಿರುವ ರಶ್ಯದ ಗೊಬ್ಬರಗಳನ್ನು ಬಿಡುಗಡೆಗೊಳಿಸಲು ಹಾಗೂ ಅಮೋನಿಯಾ ರಫ್ತನ್ನು ಮುಂದುವರಿಸುವ ನಿಟ್ಟಿನಲ್ಲಿ ರಶ್ಯದ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ರಶ್ಯ ಅಧ್ಯಕ್ಷ ಪುಟಿನ್ (Putin)ಬುಧವಾರ ಹೇಳಿದ್ದರು.

ರಶ್ಯದ ವೋಲ್ಗಾ ಪ್ರಾಂತದಿಂದ ಉಕ್ರೇನ್‍ನ ಕಪ್ಪುಸಮುದ್ರ ಬಂದರಿಗೆ  ವಾರ್ಷಿಕ 2.5 ದಶಲಕ್ಷ ಟನ್‍ಗಳಷ್ಟು ಅಮೋನಿಯಾ ಗ್ಯಾಸ್ ಅನ್ನು ಪಂಪ್ ಮಾಡಲು ಈ ಪೈಪ್‍ಲೈನ್ ಪ್ರಾರಂಭಿಸಲಾಗಿದ್ದು ಬಂದರಿನಿಂದ ಅಂತರಾಷ್ಟ್ರೀಯ ಮಾರುಕಟ್ಟೆಗೆ ರಫ್ತಾಗುತ್ತಿತ್ತು. ಫೆಬ್ರವರಿ 24ರಂದು ಉಕ್ರೇನ್ ಮೇಲೆ ರಶ್ಯ ಆಕ್ರಮಣ ಆರಂಭಿಸಿದೊಡನೆ ಪೈಪ್‍ಲೈನ್ ಅನ್ನು ಸ್ಥಗಿತಗೊಳಿಸಲಾಗಿದೆ. 

Similar News