ಇಂಡೋನೇಶ್ಯಾ ಭೂಕಂಪ: 2 ದಿನ ಮಣ್ಣಿನಡಿಯಿದ್ದ ಬಾಲಕನ ರಕ್ಷಣೆ

Update: 2022-11-24 18:06 GMT

ಜಕಾರ್ತ, ನ.24: ಇಂಡೋನೇಶ್ಯಾ(Indonesia)ದಲ್ಲಿ ಸೋಮವಾರ ಸಂಭವಿಸಿದ್ದ ಪ್ರಬಲ ಭೂಕಂಪದಿಂದ ಕುಸಿದು ಬಿದ್ದ ಕಟ್ಟಡದ ಅವಶೇಷಗಳಡಿ 2 ದಿನದಿಂದ ಅನ್ನ ನೀರಿಲ್ಲದೆ ಸಿಕ್ಕಿಕೊಂಡಿದ್ದ 6 ವರ್ಷದ ಬಾಲಕ ಪವಾಡಸದೃಶವಾಗಿ ಬದುಕಿ ಬಂದಿರುವುದಾಗಿ  ವರದಿಯಾಗಿದೆ.

ಕುಸಿದು ಬಿದ್ದಿದ್ದ ಮಣ್ಣಿನಡಿ ಹೂತುಹೋಗಿದ್ದ ಬಾಲಕ ಅಝ್ಕಾ(Azka)ನನ್ನು 2 ದಿನ ಕಳೆದ ಬಳಿಕ ಜೀವಂತವಾಗಿ ರಕ್ಷಿಸಲು ಸಾಧ್ಯವಾಗಿದ್ದು, ಅವಶೇಷಗಳಡಿ ಇನ್ನೂ ಕೆಲವರು ಬದುಕಿರಬಹುದು ಎಂಬ ನಿರೀಕ್ಷೆಗೆ ಪುಷ್ಟಿ ನೀಡಿದೆ ಎಂದು ರಕ್ಷಣಾ ತಂಡದ ಸದಸ್ಯ ಜೆಕ್ಸನ್‍(Jackson)ರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಪಶ್ಚಿಮ ಜಾವಾದ ಸಿಯಾಂಜರ್ (Cianger)ನಗರದಲ್ಲಿ ಕುಸಿದು ಬಿದ್ದ ಮನೆಯ ಅವಶೇಷಗಳಡಿಯಿಂದ ಬಾಲಕನನ್ನು ರಕ್ಷಿಸಲಾಗಿದ್ದರೂ ಈತನ ತಾಯಿ ಮತ್ತು ಅಜ್ಜಿಯನ್ನು ಜೀವಂತ ರಕ್ಷಿಸಲು ಸಾಧ್ಯವಾಗಲಿಲ್ಲ. 

ಮನೆಯ ಹಾಸಿಗೆ ಮೇಲೆ ಅಝ್ಕಾ ಬಿದ್ದಿದ್ದರೆ ಆತನ  ಮೇಲೆ ದಿಂಬೊಂದು ಇತ್ತು. ದಿಂಬು ಮತ್ತು ಅಝ್ಕಾನ ಮುಖದ ಮಧ್ಯೆ 10 ಸೆಂಟಿಮೀಟರ್ ಅಂತರವಿದ್ದ ಕಾರಣ ಆತನಿಗೆ ಉಸಿರಾಡಲು ಸಾಧ್ಯವಾಗಿದೆ. ಹಾಸಿಗೆಯ ಬದಿಯಲ್ಲಿದ್ದ ಗೋಡೆಯು ಕಟ್ಟಡದ ಇತರ ಭಾಗಗಳು ಹಾಸಿಗೆಯ ಮೇಲೆ ಕುಸಿಯದಂತೆ ತಡೆಯೊಡ್ಡಿದ್ದರಿಂದ ಅಝ್ಕಾ ಪಾರಾಗಿದ್ದಾನೆ.

ಆ ಕತ್ತಲೆಯ, ಬಿಸಿಯಾದ, ಸರಿಯಾಗಿ ಗಾಳಿ ಕೂಡಾ ಆಡದ ಸ್ಥಳದಲ್ಲಿ ಈ ಬಾಲಕ 48 ಗಂಟೆಯ ಬಳಿಕವೂ ಬದುಕಿ ಬಂದಿರುವುದು ನಿಜಕ್ಕೂ ಪವಾಡವಾಗಿದೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. 

Similar News