ಲೆ. ಜನರಲ್ ಅಸೀಮ್ ಮುನೀರ್ ಪಾಕ್ ಸೇನಾ ಮುಖ್ಯಸ್ಥ

Update: 2022-11-24 18:21 GMT

ಇಸ್ಲಮಾಬಾದ್, ನ.24: ಪಾಕಿಸ್ತಾನದ ನೂತನ  ಸೇನಾ ಮುಖ್ಯಸ್ಥರನ್ನಾಗಿ ಲೆಫ್ಟಿನೆಂಟ್ ಜನರಲ್ ಅಸೀಮ್ ಮುನೀರ್‍ರ(
Aseem Munir)ನ್ನು ನೇಮಕ ಮಾಡಲಾಗಿದೆ.

6 ವರ್ಷದ ಸೇವಾವಧಿ ಪೂರ್ಣಗೊಳಿಸಿ ಈ ತಿಂಗಳಾಂತ್ಯ ನಿವೃತ್ತರಾಗಲಿರುವ ನಿರ್ಗಮಿತ ಜನರಲ್ ಖಮರ್ ಜಾವೆದ್ ಬಾಜ್ವ (Qamar Javed Bajwa)ಅವರ ಸ್ಥಾನಕ್ಕೆ ಮುನೀರ್‍ರನ್ನು ನೇಮಕಗೊಳಿಸಿ ಪಾಕ್ ಪ್ರಧಾನಿ ಶಹಬಾಝ್ ಶರೀಫ್(Shahbaz Sharif) ಆದೇಶ ಜಾರಿಗೊಳಿಸಿದ್ದಾರೆ. ಈ ಹಿಂದೆ  ಐಎಸ್‍ಐಯ ಮುಖ್ಯಸ್ಥರಾಗಿದ್ದ ಮುನೀರ್‍ರನ್ನು ಆಗಿನ ಪ್ರಧಾನಿ ಇಮ್ರಾನ್‍ಖಾನ್ ವಜಾಗೊಳಿಸಿದ್ದರು. ಇದೀಗ ಮುನೀರ್‍ರನ್ನು ಸೇನಾ ಮುಖ್ಯಸ್ಥರನ್ನಾಗಿ ನೇಮಿಸಿರುವುದು ಇಮ್ರಾನ್‍ಗೆ ಆಗಿರುವ ಹಿನ್ನಡೆ ಎಂದೇ ವಿಶ್ಲೇಷಿಸಲಾಗಿದೆ.

ನೇಮಕಾತಿಯನ್ನು ಅಧ್ಯಕ್ಷ ಆರಿಫ್ ಆಲ್ವಿಯವರಿಗೆ ಅನುಮೋದನೆಗಾಗಿ ಕಳುಹಿಸಲಾಗಿದೆ ಎಂದು ರಕ್ಷಣಾ ಸಚಿವ ಖವಾಜ ಆಸಿಫ್ ಹೇಳಿದ್ದಾರೆ. ಆರಿಫ್ ಆಲ್ವಿ ಇಮ್ರಾನ್‍ಖಾನ್ ಅವರ ಪಕ್ಷದ ಮುಖಂಡರಾಗಿದ್ದಾರೆ.

ಮುನೀರ್ ಪ್ರಸ್ತುತ ಸೇನಾ ಕೇಂದ್ರ ಕಚೇರಿಯಲ್ಲಿ ,  ಸೇನೆಯ ಎಲ್ಲಾ ಘಟಕಗಳಿಗೂ ಸರಬರಾಜು ಕಾರ್ಯದ ಮೇಲುಸ್ತುವಾರಿ ವಹಿಸುವ  ಕ್ವಾರ್ಟರ್‍ಮಾಸ್ಟರ್ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಾಕಿಸ್ತಾನ ಸೇನೆಯ ಪತ್ತೇದಾರಿ ವಿಭಾಗದಲ್ಲೂ ಮುನೀರ್ ಕಾರ್ಯನಿರ್ವಹಿಸಿದ್ದರು. ಚೀನಾ, ಭಾರತ ಮತ್ತು ಅಫ್ಘಾನಿಸ್ತಾನದೊಂದಿಗಿನ ಉತ್ತರದ ಗಡಿಭಾಗದಲ್ಲಿ ಬಾಜ್ವಾ ಅವರ ನೇರ ಆಜ್ಞೆಯಡಿ ಮುನೀರ್ ಕಾರ್ಯನಿರ್ವಹಿಸಿದ್ದರು.

ದೇಶದ ರಾಜಕೀಯ, ವಿಶೇಷವಾಗಿ ವಿದೇಶ ಮತ್ತು ರಕ್ಷಣಾ ಕಾರ್ಯನೀತಿಯ ಮೇಲೆ ಹೆಚ್ಚಿನ ಪ್ರಭಾವ ಹೊಂದಿರುವ ಪಾಕ್ ಸೇನಾ ಮುಖ್ಯಸ್ಥರ ನೇಮಕಾತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ. 1947ರಲ್ಲಿ ರಚನೆಯಾದಂದಿನಿಂದ ಪಾಕಿಸ್ತಾನದ ಇತಿಹಾಸದ 50%ದಷ್ಟು ಅವಧಿಯಲ್ಲಿ ಸೇನೆಯು ನೇರ ಆಡಳಿತ ನಡೆಸಿದೆ. 

Similar News