1971ರ ಪಾಕ್ ಶರಣಾಗತಿ ರಾಜಕೀಯ ವೈಫಲ್ಯ: ಜ. ಖಮರ್ ಬಾಜ್ವ

Update: 2022-11-24 18:25 GMT

ಇಸ್ಲಮಾಬಾದ್, ನ.24: ಭಾರತದ ಜತೆಗಿನ 1971ರ ಯುದ್ಧದಲ್ಲಿ ಪಾಕಿಸ್ತಾನದ ಶರಣಾಗತಿ ಸೇನೆಯ ವೈಫಲ್ಯವಲ್ಲ, ರಾಜಕೀಯ ವೈಫಲ್ಯ ಎಂದು ಪಾಕ್ ಸೇನೆಯ ನಿರ್ಗಮಿತ ಮುಖ್ಯಸ್ಥ ಜನರಲ್ ಖಮರ್ ಜಾವೆದ್ ಬಾಜ್ವ(Qamar Javed Bajwa) ಬುಧವಾರ ಹೇಳಿರುವುದಾಗಿ `ದಿ ಡಾನ್'  ವರದಿ ಮಾಡಿದೆ.

ಸೇನೆಯ  ವಾರ್ಷಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ` ದಾಖಲೆಯನ್ನು ಸರಿಪಡಿಸಲು ನಾನು ಬಯಸುತ್ತೇನೆ. ಆ ಯುದ್ಧದಲ್ಲಿ ಹೋರಾಡಿದ್ದ ನಮ್ಮ ಸೇನೆಯ ಯೋಧರ ಸಂಖ್ಯೆ 92,000ವಲ್ಲ, ಕೇವಲ 34,000 ಯೋಧರು. ಉಳಿದವರು ವಿವಿಧ ಸರಕಾರಿ ಇಲಾಖೆಗಳಿಂದ ಬಂದವರು' ಎಂದರು.

ಬಾಂಗ್ಲಾದೇಶ ವಿಮೋಚನಾ ಯುದ್ಧ ಎಂದೂ ಕರೆಯಲಾಗುವ 1971ರ ಭಾರತ-ಪಾಕ್ ಯುದ್ಧಕ್ಕೆ  ಆಗಿನ ಪೂರ್ವ ಪಾಕಿಸ್ತಾನದಲ್ಲಿ ಪಾಕ್ ಸರಕಾರದ ವಿರುದ್ಧ ನಡೆಯುತ್ತಿದ್ದ ದಂಗೆ ಮೂಲ ಕಾರಣವಾಗಿತ್ತು. ಆಗ ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಬಾಂಗ್ಲಾದೇಶದ ಹೋರಾಟಕ್ಕೆ ಬೆಂಬಲ ನೀಡಿದ್ದರು ಮತ್ತು 1971ರ ಡಿಸೆಂಬರ್ 3ರಂದು ಭಾರತದ ಸೇನೆ ಪಾಕ್‍ನೊಂದಿಗೆ ಪೂರ್ಣಪ್ರಮಾಣದ ಯುದ್ಧದಲ್ಲಿ ತೊಡಗಿತು. ಬಾಂಗ್ಲಾದ ಮುಕ್ತಿವಾಹಿನಿ ಪಡೆ ಹಾಗೂ ಭಾರತದ ಸೇನೆಯನ್ನೊಳಗೊಂಡ ಮಿತ್ರಪಡೆಗೆ 1971ರ ಡಿಸೆಂಬರ್ 16ರಂದು ಪಾಕ್ ಪಡೆಯ ಮುಖ್ಯಸ್ಥ ಜನರಲ್ ಅಮೀರ್ ಅಬ್ದುಲ್ಲಾಖಾನ್ ನಿಯಾಝಿ ತಮ್ಮ ಸೇನೆಯೊಂದಿಗೆ ಶರಣಾದರು.

ಈ ಯುದ್ಧದಲ್ಲಿ ಭಾರತದ 2,50,000 ಯೋಧರು, ಬಾಂಗ್ಲಾ ಮುಕ್ತಿವಾಹಿನಿಯ 2 ಲಕ್ಷ ತರಬೇತಿ ಹೊಂದಿದ ಯೋಧರು ಪಾಲ್ಗೊಂಡಿದ್ದರೆ, ನಮ್ಮ ಕೇವಲ 34,000 ಯೋಧರು ಶೌರ್ಯದಿಂದ ಹೋರಾಡಿದರು. ಆಗ ಸೇನೆ ಶರಣಾಗಲು ಸೇನೆಯ ವೈಫಲ್ಯ ಕಾರಣವಲ್ಲ, ರಾಜಕೀಯ ವೈಫಲ್ಯ ಕಾರಣ ಎಂದು ಬಾಜ್ವಾ ಹೇಳಿದ್ದಾರೆ. 

ಕಳೆದ 7 ದಶಕಗಳಿಂದ ಪಾಕ್ ಸೇನೆ ದೇಶದ ರಾಜಕೀಯದಲ್ಲಿ ಅಸಂವಿಧಾನಿಕವಾಗಿ ಹಸ್ತಕ್ಷೇಪ ನಡೆಸಿದೆ ಎಂದು  ಇದೇ ಸಮಯ ಅವರು ಒಪ್ಪಿಕೊಂಡರು ಎಂದು `ದಿ ಡಾನ್' ವರದಿ ಮಾಡಿದೆ.

Similar News