ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಟಿಟಿಇ ಹೊರತಳ್ಳಿದ ಸೈನಿಕ ಮೃತ್ಯು

Update: 2022-11-25 02:39 GMT

ಬರೇಲಿ: ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಟಿಟಿಇ ರೈಲಿನಿಂದ ಹೊರತಳ್ಳಿದ ಸೈನಿಕ ಸೋನು ಕುಮಾರ್ ಸಿಂಗ್ (29) ಮೃತಪಟ್ಟಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.

ರಜಪೂತ್ ರೈಫಲ್ಸ್‌ಗೆ ಸೇರಿದ ಸೋನುಕುಮಾರ್ ಸಿಂಗ್ ಎಂಬವರ ಎರಡೂ ಕಾಲುಗಳು ಈ ಘಟನೆಯಲ್ಲಿ ತುಂಡರಿಸಲ್ಪಟ್ಟಿದ್ದವು. ಮಿಲಿಟರಿ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋನು ಮೃತಪಟ್ಟಿದ್ದಾರೆ ಎಂದು ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಹೇಳಿದ್ದಾರೆ.

ದಿಬ್ರೂಗಢ- ಹೊಸದಿಲ್ಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು (20503) ಬರೇಲಿ ನಿಲ್ದಾಣದಲ್ಲಿ ನಿಲುಗಡೆಯ ಬಳಿಕ ಬೆಳಗ್ಗೆ 9.30ಕ್ಕೆ ಹೊರಟಿದ್ದು, ಕರ್ತವ್ಯಕ್ಕಾಗಿ ಬಲಿಯಾ ಜಿಲ್ಲೆಯ ಸೋನು ದೆಹಲಿಗೆ ತೆರಳುವ ಸಲುವಾಗಿ ಬರೇಲಿಯಲ್ಲಿ ರೈಲು ಏರಿದ್ದರು.

ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಕುಪನ್ ಬೋರೆ ಎಂಬ ಟಿಟಿಇ 2ನೇ ಪ್ಲಾಟ್‍ಫಾರಂನಲ್ಲಿ ರೈಲಿನಿಂದ ತಳ್ಳಿದ ಕಾರಣದಿಂದ ಕೆಳಕ್ಕೆ ಬಿದ್ದ ಸೈನಿಕ ತೀವ್ರವಾಗಿ ಗಾಯಗೊಂಡಿದ್ದರು. ಬಿದ್ದ ವೇಳೆ ಅವರ ಒಂದು ಕಾಲು ರೈಲಿನ ಚಕ್ರದಡಿ ಸಿಲುಕಿ ಬೇರ್ಪಟ್ಟಿದ್ದು, ಇನ್ನೊಂದು ಕಾಲು ಜಜ್ಜಿ ಹೋಗಿದೆ. ಶಸ್ತ್ರಚಿಕಿತ್ಸೆ ನಡೆಸಿ ಇದನ್ನು ಕತ್ತರಿಸಲಾಗಿತ್ತು.

ಸುಬೇದಾರ್ ಹರೀಂದರ್ ಕುಮಾರ್ ಸಿಂಗ್ ಎಂಬವರು ನೀಡಿದ ದೂರಿನ ಮೇಲೆ ಭಾರತೀಯ ದಂಡಸಂಹಿತೆ ಸೆಕ್ಷನ್ 326 ಮತ್ತು 307 ರ ಅನ್ವಯ ಟಿಟಿಇ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು.

ಇದನ್ನು ಓದಿ : ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಿಂದ ಹೊರದಬ್ಬಿದ ಟಿಟಿಇ: ಕಾಲು ಕಳೆದುಕೊಂಡ ಸೈನಿಕ

ಮೃತ ಸೈನಿಕ ತನ್ನ ಮಗನ ನಾಮಕರಣಕ್ಕೆ ರಜೆ ಪಡೆದಿದ್ದು, ರಜೆ ಮುಗಿಸಿ ಕರ್ತವ್ಯಕ್ಕೆ ಮರಳುತ್ತಿದ್ದರು. ರೈಲಿನಿಂದ ತಳ್ಳಿದ ಬಳಿಕ ಟಿಟಿಇ ಕೈ ಮೇಲೆ ಬಲವಾಗಿ ಹೊಡೆದಿದ್ದರಿಂದ ತಮ್ಮ ಕೆಳಕ್ಕೆ ಬಿದ್ದಿದ್ದ. ಟಿಟಿಇ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮೃತ ಸೈನಿಕನ ಅಣ್ಣ, ಸಿಐಎಸ್‍ಎಫ್ ಜವಾನ ಜಿತೇಂದ್ರ ಆಗ್ರಹಿಸಿದ್ದಾರೆ.

Similar News