ದಿಲ್ಲಿ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ: 50 ಅಂಗಡಿಗಳು ಧ್ವಂಸ,ಬೆಂಕಿ ನಂದಿಸಲು ಹರಸಾಹಸ
ಹೊಸದಿಲ್ಲಿ: ಹಳೆ ದಿಲ್ಲಿಯ ಚಾಂದಿನಿ ಚೌಕ್‌ನಲ್ಲಿರುವ ಭಗೀರಥ ಅರಮನೆ ಮಾರುಕಟ್ಟೆಯಲ್ಲಿ ನಿನ್ನೆ ಸಂಜೆ ಸಂಭವಿಸಿದ ಭಾರೀ ಬೆಂಕಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಸ್ಥಳದಲ್ಲಿ ಸುಮಾರು 150 ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. 50 ಅಂಗಡಿಗಳು ಬೆಂಕಿಗಾಹುತಿಯಾಗಿವೆ.
ಸ್ಥಳೀಯರು ಘಟನೆಯ ಬಗ್ಗೆ ರಾತ್ರಿ 9.20ಕ್ಕೆ ಮಾಹಿತಿ ನೀಡಿದ್ದು, ಬಳಿಕ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.
ಹಳೆ ದಿಲ್ಲಿಯಲ್ಲಿನ ಕಿರಿದಾದ ದಾರಿಗಳು ಅಗ್ನಿಶಾಮಕ ವಾಹನಗಳಿಗೆ ಘಟನಾ ಸ್ಥಳಕ್ಕೆ ತಲುಪಲು ಕಷ್ಟವಾಗಿಸಿತು. ಮಾರುಕಟ್ಟೆಯಲ್ಲಿದ್ದ ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ.
"ಕಟ್ಟಡದ ಹೆಚ್ಚಿನ ಭಾಗವು ಹಾನಿಗೊಳಗಾಗಿದೆ ಮತ್ತು ಅಧಿಕಾರಿಗಳು ಬೆಂಕಿಯನ್ನು ನಂದಿಸಲು ರಿಮೋಟ್ ಕಂಟ್ರೋಲ್ ಅಗ್ನಿಶಾಮಕ ಯಂತ್ರವನ್ನು ಬಳಸುತ್ತಿದ್ದಾರೆ" ಎಂದು ದಿಲ್ಲಿ ಅಗ್ನಿಶಾಮಕ ಸೇವಾ ನಿರ್ದೇಶಕ ಅತುಲ್ ಗಾರ್ಗ್ ಹೇಳಿದ್ದಾರೆ.
ವಿದ್ಯುತ್ ತಂತಿಗೆ ಬೆಂಕಿ ತಗುಲುವುದರೊಂದಿಗೆ ಅಕ್ಕಪಕ್ಕದ ಕಟ್ಟಡಗಳಿಗೆ ಬೆಂಕಿ ವ್ಯಾಪಿಸುತ್ತಿರುವುದನ್ನು ವಿಡಿಯೋದಲ್ಲಿ ಕಂಡುಬಂದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ